ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ಕ್ಷೇತ್ರವಾಗಿರುವ ಮೈಸೂರು ಕ್ಷೇತ್ರವನ್ನು ಗೆಲ್ಲಲು ಒಂದು ರಣತಂತ್ರವನ್ನು ಚರ್ಚಿಸಲಾಗುತ್ತಿದೆ. ಖ್ಯಾತ ಚಿತ್ರ ನಟ ʻಬಡವರ ಮಕ್ಕಳು ಬೆಳೀಬೇಕುʼ ಖ್ಯಾತಿಯ ನಟ ರಾಕ್ಷಸ ಡಾಲಿ ಧನಂಜಯ ಅವರನ್ನು ಕಣಕ್ಕಿಳಿಸಲು ಯೋಜನೆ ನಡೆದಿದೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದರಾಗಿರುವವರು ಪ್ರತಾಪ್ ಸಿಂಹ. ಅವರು ಸಿಎಂ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ನೇರವಾದ ಠಕ್ಕರ್ ಕೊಡುತ್ತಿದ್ದಾರೆ. ಒಂದು ಹಂತದಲ್ಲಿ ಪ್ರತಾಪ್ ಸಿಂಹ ವಿರುದ್ಧ ಯತೀಂದ್ರ ಸಿದ್ದರಾಮಯ್ಯ ಅವರೇ ಕಣಕ್ಕಿಳಿಯುತ್ತಾರೆ ಎಂಬ ಚರ್ಚೆ ನಡೆದಿತ್ತು. ಆದರೆ, ಈಗ ಡಾಲಿ ಧನಂಜಯ ಅವರ ಹೆಸರು ಕೇಳಿಬರುತ್ತಿದೆ.
ಡಾಲಿ ಧನಂಜಯ ಅವರು ಮೈಸೂರು ಕ್ಷೇತ್ರದಲ್ಲಿ ಕಣಕ್ಕಿಳಿದರೆ ದೊಡ್ಡ ಮಟ್ಟದ ಸಂಚಲನ ಸೃಷ್ಟಿಯಾಗಲಿದೆ. ಸಿದ್ದರಾಮಯ್ಯ ಜತೆ ಒಡನಾಟ ಡಾಲಿ ಅವರು ಜನಪ್ರಿಯ ನಟ ಆಗಿರುವ ಕಾರಣಕ್ಕೆ ಪ್ರಚಾರ ನಿರಾಯಾಸವಾಗಿ ನಡೆಯುತ್ತದೆ.ಗೆಲ್ಲುವುದು ಕಷ್ಟವಲ್ಲ ಎಂಬ ಲೆಕ್ಕಾಚಾರ ಕಾಂಗ್ರೆಸ್ನದ್ದು.
ರಾಜ್ಯ ಸರ್ಕಾರ ಡಾಲಿ ಧನಂಜಯ ಅವರನ್ನು ಲಿಡ್ಕರ್ ಕಂಪನಿಯ ರಾಯಭಾರಿಯಾಗಿ ಮಾಡಿದೆ. ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಭಾಷಣದಲ್ಲಿ ಡಾಲಿ ಧನಂಜಯ ಅವರ ಸಿನಿಮಾದ ಸಂಭಾಷಣೆಯನ್ನು ಉಲ್ಲೇಖಿಸಿದ್ದಾರೆ.
ಡಾಲಿ ಧನಂಜಯ ಒಬ್ಬ ನಟನಾಗಿ, ನಿರ್ಮಾಪಕನಾಗಿ ಜನಪ್ರಿಯತೆ ಪಡೆದಿದ್ದಾರೆ.
ಡಾಲಿ ಧನಂಜಯ ಲಿಂಗಾಯತರು. ಮೈಸೂರಿನಲ್ಲಿ ಎಸ್ಸಿ, ಕುರುಬ, ಮುಸ್ಲಿಂ ಕಾಂಗ್ರೆಸ್ ಪಾಲಿನ ಸಾಂಪ್ರದಾಯಿಕ ಮತಗಳು ಇವೆ. ಅದಕ್ಕೆ ಲಿಂಗಾಯತ ಶಕ್ತಿ ಸೇರಿಕೊಂಡರೆ ಗೆಲ್ಲಬಹುದು ಎಂಬ ಲೆಕ್ಕಾಚಾರ.
ಡಾಲಿ ಧನಂಜಯ ಅವರು ಸಾಮಾಜಿಕ ಬದ್ಧತೆ, ಸೈದ್ಧಾಂತಿಕ ಸ್ಪಷ್ಟತೆ ಇರುವ ವ್ಯಕ್ತಿ. ಅವರ ಚಿಂತನೆಗಳು ಕಾಂಗ್ರೆಸ್ಗೆ ಹೆಚ್ಚು ಹತ್ತಿರವಾಗಿವೆ.
2014ರ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಗೆದ್ದಿದ್ದು ತಮ್ಮ ಜನಪ್ರಿಯತೆಯ ಆಧಾರದಲ್ಲಿ. ಈಗಲೂ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡು ಗೆಲ್ಲಬಹುದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.