
ಉಜಿರೆ : ಬೆಳ್ತಂಗಡಿ ತಾಲೂಕಿನ ಬೆಳಾಲು
ಗ್ರಾಮದ ಕೊಡೋಳುಕೆರೆ, ಮುಂಡೊಟ್ಟು ಕಾಡಿನಲ್ಲಿ ಮಾರ್ಚ್ 22 ರಂದು ಪತ್ತೆಯಾದ ಮೂರು ತಿಂಗಳ ಹೆಣ್ಣು ಶಿಶುವಿನ ತಂದೆ-ತಾಯಿಯನ್ನು ಧರ್ಮಸ್ಥಳ ಪೊಲೀಸರು ಪತ್ತೆಹಚ್ಚಿದ್ದಾರೆ.ಮಗುವಿನ ತಂದೆ ಬೆಳಾಲು ಗ್ರಾಮದ ಮಾಯ ನಿವಾಸಿ ರಂಜಿತ್ ಗೌಡ ಹಾಗೂ ತಾಯಿ ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಸುಶ್ಮಿತಾ ಗೌಡ ಎಂದು ಗೊತ್ತಾಗಿದೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ರಂಜಿತ್ ಗೌಡ (27) ಮತ್ತು ಮಂಗಳೂರಿನಲ್ಲಿ ಬ್ಯೂಟಿಪಾರ್ಲರ್ ಒಂದರಲ್ಲಿ ಉದ್ಯೋಗದಲ್ಲಿದ್ದ ಸುಶ್ಮಿತಾ ಗೌಡ (22) ಪರಸ್ಪರ ಪ್ರೀತಿಸಿದ್ದರು. ಮದುವೆಯಾಗುವ ಭರವಸೆ ನೀಡಿ ರಂಜಿತ್ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ. ಅವರಿಗೆ ಹೆಣ್ಣು ಶಿಶು ಜನಿಸಿತ್ತು. ನಂತರ ಅವರಿಬ್ಬರ ನಡುವೆ ಮನಃಸ್ತಾಪ ಉಂಟಾಗಿತ್ತು. ಯುವತಿ ಮಗುವನ್ನು ರಂಜಿತ್ ಗೌಡನ ಮನೆಗೆ ತಂದು ಬಿಟ್ಟು ಹೋಗಿದ್ದರು. ಆತ ಮಗುವನ್ನು ಕಾಡಿನಲ್ಲಿ ಬಿಟ್ಟು ಹೋಗಿದ್ದ ಎಂದು ಮೂಲಗಳು ತಿಳಿಸಿವೆ.
ಹೆಣ್ಣು ಶಿಶು ಪತ್ತೆಯಾದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೆಳ್ತಂಗಡಿಯ ಮೇಲ್ವಿಚಾರಕಿ ಅನ್ನಪೂರ್ಣ ಮಾರ್ಚ್ 22ರಂದು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಧರ್ಮಸ್ಥಳ ಪಿಎಸ್‌ಐ ಸಮರ್ಥ ಆರ್. ಗಾಣಿಗೇರಾ ನೇತೃತ್ವದಲ್ಲಿ ಪೊಲೀಸರು ಏ.2 ರಂದು ರಂಜಿತ್ ಗೌಡರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಪ್ರಕರಣ ಬೆಳಕಿಗೆ ಬಂದಿದೆ. ರಂಜಿತ್ ಹಾಗೂ ಸುಶ್ಮಿತಾ ಇಬ್ಬರು ಕೂಡಾ ಸ್ವ-ಇಚ್ಛೆಯಿಂದ ಮದುವೆಯಾಗುವುದಾಗಿ
ಪೊಲೀಸರಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಶಿಶು ಪುತ್ತೂರಿನಲ್ಲಿ ರಾಮಕೃಷ್ಣ ಆಶ್ರಮದಲ್ಲಿದೆ. ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಆಶ್ರಮದಲ್ಲಿರುವ ಮಗುವನ್ನು ತಂದೆ-ತಾಯಿಗೆ ಹಸ್ತಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ತಂದೆ-ತಾಯಿ ಯಾರು ?
ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಾಯ ನಿವಾಸಿ ತಿಮ್ಮಪ್ಪ ಗೌಡರ ಮಗ ಧರ್ಮಸ್ಥಳದಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ರಂಜಿತ್ ಗೌಡ (27) ಮತ್ತು ಧರ್ಮಸ್ಥಳ ಗ್ರಾಮದ ಕೊಲಂಗಾಜೆಯ ಮಂಗಳೂರಲ್ಲಿ ಕೆಲಸ ಮಾಡುತ್ತಿದ್ದ ಸುಶ್ಮಿತಾ ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಪೊಲೀಸರು ಮಗುವಿನ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೆಳಾಲಿನ ಕಾಡು ಪ್ರದೇಶದಲ್ಲಿ ಪತ್ತೆಯಾದ ಮಗುವನ್ನು ಸಾರ್ವಜನಿಕರು ರಕ್ಷಿಸಿ ಆರೈಕೆ ಮಾಡಿದ್ದರು. ನಂತರ ಧರ್ಮಸ್ಥಳ ಪೊಲೀಸರ ಸಮ್ಮುಖದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ಪುತ್ತೂರು ಅಶ್ರಮಕ್ಕೆ ಹಸ್ತಾಂತರಿಸಿದ್ದರು.
ಅಪರಿಚಿತ ಹೆಣ್ಣು ಮಗು ಪತ್ತೆಯಾದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಅನ್ನಪೂರ್ಣ ಮಾ.22 ರಂದು ದೂರು ನೀಡಿದ್ದರು. ಈ ಬಗ್ಗೆ ಕಾರ್ಯಾಚರಣೆಗಿಳಿದ ಧರ್ಮಸ್ಥಳ ಸಬ್ ಇನ್ಸೆಪೆಕ್ಟರ್ ಸಮರ್ಥ ಆರ್. ಗಾಣಿಗೇರಾ ಮತ್ತು ತಂಡಕ್ಕೆ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಲಭಿಸಿದ್ದು, ಎ.2 ರಂದು ರಾತ್ರಿ ಮಗುವಿನ ತಂದೆ ಬೆಳಾಲು ನಿವಾಸಿ ರಂಜಿತ್ ಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದಂತೆಯೇ ಇದೀಗ ಇಬ್ಬರು ಕೂಡ ಸಣಚೆಯಿಂದ ಒಂದು ವಾರದೊಳಗೆ ಸ್ವಇಚ್ಛೆಯಿಂದ ಒಂದು ವಾರದೊಳಗೆ ಮದುವೆಯಾಗುವುದಾಗಿ ಪೋಲಿಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಮುಂದೆ ಇಬ್ಬರ ಕುಟುಂಬಸ್ಥರು ಒಪ್ಪಿರುವುದಾಗಿ ತಿಳಿದು ಬಂದಿದೆ.
ಘಟನೆ
ರಂಜಿತ್ ಮತ್ತು ಸುಶ್ಮೀತಾ ಪರಸ್ಪರ ಪ್ರೀತಿಸುತ್ತಿದ್ದು, ಈ ವಿಚಾರ ಎರಡು ಮನೆಯವರಿಗೂ ತಿಳಿದಿರಲಿಲ್ಲ ಎನ್ನಲಾಗಿದೆ. ಈ ಮಧ್ಯೆ ಈಕೆ ಗರ್ಭಿಣಿಯಾಗಿದ್ದ ವಿಚಾರ ಯಾರಿಗೂ ಹೇಳದೆ ಇಬ್ಬರು ಮಾತ್ರ ಜಾಗೃತೆ ವಹಿಸಿದ್ದರು. ಕ್ಲಿನಿಕ್‌ಗೆ ಪ್ರತಿ ತಿಂಗಳು ದಂಪತಿಗಳಾಗಿ ಹೋಗುತ್ತಿದ್ದ ಇವರು, ತಾಯಿ ಕಾರ್ಡ್ ಕೇಳಿದ್ದಕ್ಕೆ ಅದು ಕಾಣೆಯಾಗಿದೆ ಅಂತ ಹೇಳುತ್ತಿದ್ದರು ಎನ್ನಲಾಗಿದೆ.
ಉಜಿರೆಯಲ್ಲಿ ಬಾಡಿಗೆ ಮನೆ ಮಾಡಿ ಆಕೆಯನ್ನು ಬಿಟ್ಟಿದ್ದ ಆತ ವಾರಕ್ಕೆ ಒಮ್ಮೆ ಬಂದು ನೋಡಿ ಹೋಗುತ್ತಿದ್ದು, ನಾರ್ಮಲ್ ಡೆಲಿವರಿ ಆಗಿದ್ದರಿಂದ ಆಸ್ಪತ್ರೆಗೆ ಹೋಗದೆ ಬಾಡಿಗೆ ರೂಂ ನಲ್ಲೇ ಇದ್ದರು ಎಂದು ತಿಳಿದು ಬಂದಿದೆ. ಮದುವೆಯಾಗದ ಕಾರಣ ಕುಟುಂಬದವರಿಗೆ ಹೆದರಿ ಮಗುವನ್ನು ಕಾಡಿಗೆ ಬಿಟ್ಟಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಇದಲ್ಲದೆ ಇಬ್ಬರ ಮನೆಗಳಿಗೂ ಪೊಲೀಸರು ಬರುವವರೆಗೂ ಈ ವಿಚಾರದ ಬಗ್ಗೆ ಯಾವುದೇ ಸುಳಿವು ಲಭಿಸಿಲ್ಲ ಎನ್ನಲಾಗಿದೆ.