ದೆಹಲಿ : ಇಬ್ಬರು ದಿಗ್ಗಜರ ನಡುವಿನ ಸ್ಪರ್ಧೆಯಿಂದ ಇದೀಗ ತಿರುವನಂತಪುರ ದೇಶದ ಗಮನ ಸೆಳೆದಿದೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲೇಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಜೋಡಿ ರಣತಂತ್ರ ರೂಪಿಸಿದ್ದು ಕೇಂದ್ರ ಸಚಿವರನ್ನು ಕಣಕ್ಕೆ ಇಳಿಸಿದೆ. ಈ ಮೂಲಕ ದೇವರನಾಡಿನಲ್ಲಿ ಕಮಲ ಕಹಳೆಯೂದಲು ಸಿದ್ಧತೆ ನಡೆಸಿದೆ.

ತಿರುವನಂತಪುರದಿಂದ ಹಾಲಿ ಸಂಸದ ಶಶಿ ತರೂರ್ ಅವರಿಗೆ ಕಾಂಗ್ರೆಸ್ ಮತ್ತೆ ಮಣೆ ಹಾಕಿದೆ. ಇತ್ತ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಬಿಜೆಪಿ ಅಭ್ಯರ್ಥಿಯಾಗಿರುವುದು ಕುತೂಹಲ ಹೆಚ್ಚಾಗುವಂತೆ ಮಾಡಿದೆ.

ರಾಜ್ಯಸಭಾ ಸದಸ್ಯರಾಗಿರುವ ರಾಜೀವ್‌ ಚಂದ್ರಶೇಖರ್ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಡಿದ್ದವು. ಆದರೆ, ಪಕ್ಷ ಅಂತಿಮವಾಗಿ ತಿರುವನಂತಪುರದಿಂದ ಟಿಕೆಟ್ ಘೋಷಿಸಿದೆ. ರಾಜೀವ್‌ ರಾಜ್ಯಸಭಾ ಸದಸ್ಯತ್ವ ಏಪ್ರಿಲ್‌ಗೆ ಮುಗಿಯಲಿದೆ.

ಕೇರಳದಲ್ಲಿ ಬಿಜೆಪಿ ಯಾವುದೇ ಲೋಕಸಭೆ ಸಂಸದರನ್ನು ಹೊಂದಿಲ್ಲದ ಕಾರಣ ರಾಜೀವ್‌ ಅವರನ್ನು ಕಣಕ್ಕಿಳಿಸುವ ಮೂಲಕ ಗೆಲುವಿನ ನಗೆ ಬೀರಲು ಸಜ್ಜಾಗಿದೆ. ಆದರೆ, ಅನುಭವಿ ರಾಜಕಾರಣಿ ತರೂರ್ ಅವರಿಗೆ ರಾಜೀವ್‌ ಸವಾಲೊಡ್ಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

2019ರ ಚುನಾವಣೆಯಲ್ಲಿ ಶಶಿ ತರೂರ್ ಅವರು 4 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದರೆ, ಇತ್ತ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಕುಮ್ಮನಂ ರಾಜಶೇಖರನ್‌ 3.16 ಲಕ್ಷ ಮತಗಳನ್ನು ಪಡೆದಿದ್ದರು. ತರೂರ್ 99,989 ಮತಗಳ ಅಂತರದಿಂದ ರಾಜಶೇಖರನ್‌ ವಿರುದ್ಧ ಗೆಲುವು ಸಾಧಿಸಿದ್ದರು.

ಶಬರಿಮಲೆ ಮಹಿಳೆಯರ ಪ್ರವೇಶ ವಿಷಯವು ಬಿಜೆಪಿಯ ಪರವಾಗಿ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.