ಬೆಂಗಳೂರು : ಬಿಬಿಎಂಪಿ ಐದು ಭಾಗಗಳಾಗಿ ವಿಂಗಡನೆ ಮಾಡಲು ಆಡಳಿತರೂಢ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

ಬಿಬಿಎಂಪಿ ವಿಭಜಿಸಿ ಐದು ಭಾಗ ಮಾಡಿದರೆ ಬೆಂಗಳೂರು ಅಭಿವೃದ್ಧಿಗೆ ಸಹಾಯವಾಗಲಿದೆ. ಐದು ಕಡೆ ಮೇಯರ್ ನಮ್ಮ ಪಕ್ಷದವರನ್ನೇ ಆಯ್ಕೆ ಮಾಡಬಹುದು ಎಂದು ಕಾಂಗ್ರೆಸ್ ಶಾಸಕರು ಇತ್ತೀಚಿಗೆ ನಡೆದ ಸಭೆಯಲ್ಲಿ ಚರ್ಚಿಸಿದ್ದಾರೆ. ಬಿಬಿಎಂಪಿ ವಿಭಜನೆಗೆ ಸಮಿತಿ ರಚನೆ ಮಾಡಲಾಗಿದ್ದು ಸಮಿತಿಯ ಅಧ್ಯಕ್ಷ ಬಿ.ಎಸ್. ಪಾಟೀಲ ಆಡಳಿತ ದೃಷ್ಟಿಯಿಂದ ಪಾಲಿಕೆ ವಿಭಜನೆ ಸರಿಯಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಸುತ್ತಲಿನ ಹಲವು ಪ್ರದೇಶ ಸೇರಿಸಿ 400 ವಾರ್ಡ್ ರಚನೆಗೆ ಬಿ.ಎಸ್. ಪಾಟೀಲ ಸಮಿತಿ ಶಿಫಾರಸು ಮಾಡಿದೆ. ಬೆಂಗಳೂರು ಕೇಂದ್ರ, ಉತ್ತರ, ಪೂರ್ವ, ಪಶ್ಚಿಮ, ದಕ್ಷಿಣ ಎಂಬ ಪಾಲಿಕೆಗಳನ್ನು ರಚಿಸುವಂತೆ ಸಲಹೆ ನೀಡಿದೆ. ಇದರನ್ವಯ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಬೇಕು, ಬೆಂಗಳೂರು ಸುತ್ತಲಿನ ನಗರಗಳು ಬಿಬಿಎಂಪಿ ವ್ಯಾಪ್ತಿಗೆ ಬರಬೇಕು. ನೆಲಮಂಗಲ, ಹೊಸಕೋಟೆ, ಬಿಡದಿ, ರಾಮನಗರ, ಕನಕಪುರ, ದೇವನಹಳ್ಳಿ ಸೇರಿ ಬೆಂಗಳೂರು ಗ್ರಾಮಾಂತರದ ಹಲವು ಜಿಲ್ಲೆಗಳು ಬಿಬಿಎಂಪಿಗೆ ಒಳಪಡಲಿವೆ. ಆಡಳಿತ ಕೇಂದ್ರ ಬಿಬಿಎಂಪಿ ಮೂಲಕ ನಗರಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಪಾಟೀಲ ಅವರ ಸಮಿತಿ ಶಿಫಾರಸು ಮಾಡಿದೆ.

ಈ ನಡುವೆ ಪಾಲಿಕೆ ವಿಭಜನೆಗೆ ಜನರಿಂದ ವಿರೋಧ ವ್ಯಕ್ತವಾಗುತ್ತಿದೆ. ಪಾಲಿಕೆಗೆ ಜನಪ್ರತಿನಿಧಿಗಳು ಇಲ್ಲದೆ ಈ ಆಗಸ್ಟ್ ಬಂದರೆ ಐದು ವರ್ಷವಾಗುತ್ತದೆ. ಅಧಿಕಾರಿಗಳದ್ದೇ ಕಾರುಬಾರು. ಯಾವ ಕೆಲಸವೂ ಆಗುತ್ತಿಲ್ಲ. ಸರಕಾರಕ್ಕೆ ಚುನಾವಣೆ ಮುಂದೂಡಲು ಆಯುಧ ಬೇಕು. ಆದ್ದರಿಂದ ಪಾಲಿಕೆಯನ್ನು ಐದು ಭಾಗ ಮಾಡಲು ತಕರಾರು ಸಲ್ಲಿಸಲು ಸಮಯ ಬೇಕಾಗುತ್ತದೆ ಎಂದು ನಾಗರಿಕರು ವಿರೋಧ ವ್ಯಕ್ತಪಡಿಸಿದ್ದಾರೆ.