ಬೆಳಗಾವಿ: ಆರು ವರ್ಷಗಳ ಹಿಂದೆ ಸಂವಿಧಾನ ಓದು ಪುಸ್ತಕ ಬಿಡುಗಡೆಯಾಗುವ ಪೂರ್ವದಲ್ಲಿ ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತು ಸಮಾಜದಲ್ಲಿ ನಿರ್ಲಕ್ಷಿತ ಮನೋಭಾವವಿತ್ತು. ಈ ಕೃತಿ ಬಿಡುಗಡೆ ಮತ್ತು ಅದರ ಅಭಿಯಾನದಿಂದಾಗಿ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಜಾಗೃತಿ ಮತ್ತು ಗೌರವ ಭಾವನೆ ಮೂಡಿಸಿ, ಸಮಾಜದ ನೋಟವನ್ನೇ ಬದಲಾಯಿಸಿತು ಎಂದು ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಚ್. ಎನ್ ನಾಗಮೋಹನ ದಾಸ್ ಅಭಿಪ್ರಾಯಪಟ್ಟರು.

ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಮಾಜವಿಜ್ಞಾನ ವಿಭಾಗಗಳು ಮತ್ತು ಸಂವಿಧಾನ ಓದು ಅಭಿಯಾನ- ಕರ್ನಾಟಕ, ಬೆಂಗಳೂರು ಇವರ ಸಹಯೋಗದಲ್ಲಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನ ಓದು ಮತ್ತು ಅಭಿಯಾನದಿಂದ ಯುವಕರಲ್ಲಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಪ್ರಜ್ಞೆ ಬೆಳೆಯುತ್ತಿದೆ. ಸ್ವಾತಂತ್ರ್ಯ ಬಂದ ಮೇಲೆ ಬಹಳಷ್ಟು ಸಾಧನೆ ಮಾಡಿದ್ದೇವೆ. ಹಾಗೆಯೇ ಅನೇಕ ಸಮಸ್ಯೆಗಳು ಇನ್ನೂ ಉಳಿದಿವೆ. ಪ್ರಜ್ಞಾವಂತರಾದ ನಾವು ಆ ಸಮಸ್ಯೆಗಳನ್ನು ಸಂವಿಧಾನದ ಬೆಳಕಿನಡಿಯಲ್ಲಿ ಬಗೆಹರಿಸುವ ಪ್ರಯತ್ನ ಮಾಡಬೇಕು. ನಮ್ಮಲ್ಲಿರುವ ಜ್ಞಾನದ ದೀಪವನ್ನು ಮೊದಲು ಬೆಳಗಿಸಿ ನಂತರ ಇತರರನ್ನು ಬೆಳಗಿಸೋಣ. ಸಂವಿಧಾನವನ್ನು ನಾವು ಓದಿ ಅರ್ಥೈಸಿಕೊಂಡು ಇತರರಿಗೂ ತಿಳಿಸೋಣ. ಶಿಕ್ಷಕರು ಸಂವಿಧಾನದ ಕುರಿತು ವಿದ್ಯಾರ್ಥಿಗಳಲ್ಲಿ ಹೆಚ್ಚು ಜಾಗೃತಿ ಮೂಡಿಸಿ ಅವರನ್ನು ವಾಸ್ತವ ಜಗತ್ತಿಗೆ ಕರೆದು ತರಬೇಕಾಗಿದೆ. ಇಂಗ್ಲಿಷ್ ಮತ್ತು ಕನ್ನಡ ಭಾಷೆಯ ಮೇಲೆ ಪ್ರಭುತ್ವ ಮತ್ತು ಎರಡೂ ಸಂಸ್ಕೃತಿಯ ಆಳ ಅಧ್ಯಯನ ಇರುವ ಪ್ರೊ. ಎಂ. ಜಿ. ಹೆಗಡೆ ಅವರು ಇಂಗ್ಲಿಷ್ ಭಾಷಾಂತರವನ್ನು ಅದ್ಭುತವಾಗಿ ಮಾಡಿದ್ದಾರೆ. ಈ ಕೃತಿಯಿಂದ ಸಂವಿಧಾನದ ಶ್ರೇಷ್ಠತೆ ವಿಶ್ವವ್ಯಾಪಿ ಹರಡಲಿ ಎಂದರು.

ನ್ಯಾಯವಾದಿ ಅನಂತ ನಾಯ್ಕ ಅವರು ಸಂವಿಧಾನ ಓದು ಸಮಾಜದಲ್ಲಿ ಕ್ರಾಂತಿಯನ್ನು ಮಾಡಿದೆ. ಸಂವಿಧಾನದ ಬಗ್ಗೆ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಚರ್ಚೆಯಾಗಬೇಕು ಎಂದರು.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣ ರಾವ್ ಚಿಂಗಳೆ ಅವರು ಸಂವಿಧಾನ ಓದು ಕೃತಿಯು ಸಮಾಜದ ಅಂಚಿನವರಲ್ಲಿ ಜಾಗೃತಿ ಮೂಡಿಸಿತು. ಧರ್ಮ ಪರಿಕಲ್ಪನೆಯಿಂದ ರಾಜಮಹಾರಾಜರು ಹಾಳಾದರು. ಶಿಕ್ಷಣ ಪರಿಕಲ್ಪನೆಯಿಂದ ಸಮಾಜ ಉದ್ದಾರವಾಯಿತು ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಸಿ. ಎಂ. ತ್ಯಾಗರಾಜ ಅವರು ಪ್ರೊ. ಎಂ. ಜಿ. ಹೆಗಡೆ ಅವರು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದ ಸಂವಿಧಾನ ಓದು ಕೃತಿಯ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಿ ಮಾತನಾಡಿ, ಸಂವಿಧಾನ ಓದು ಬಹುತೇಕ ಭಾರತೀಯ ಎಲ್ಲಾ ಭಾಷೆಗಳಿಗೆ ಭಾಷಾಂತರವಾಗಿದೆ. ಅವೆಲ್ಲವುಗಳಿಗಿಂತ ಇಂಗ್ಲಿಷ್ ಭಾಷಾಂತರ ಅತ್ಯಂತ ಗುಣಮಟ್ಟದ್ದಾಗಿದೆ. ಇಂಥ ಒಂದು ಭಾಷಾಂತರದ ಅವಶ್ಯಕತೆ ಇಂದು ತುರ್ತಾಗಿತ್ತು. ಈ ಕೃತಿ ಅದನ್ನು ನೀಗಿಸಿದೆ. ಇದರ ಮರಾಠಿ ಭಾಷಾಂತರವನ್ನು ನಮ್ಮ ವಿಶ್ವವಿದ್ಯಾಲಯದ ಮರಾಠಿ ವಿಭಾಗದಿಂದ ತಕ್ಷಣ ಮಾಡಿಸುತ್ತೇನೆ ಎಂದರು. ಸಂವಿಧಾನದ ಪ್ರಜ್ಞೆ ಇಲ್ಲದ ವ್ಯಕ್ತಿ ಒಳ್ಳೆಯ ಬದುಕನ್ನು ನಡೆಸುವುದು, ಒಳ್ಳೆಯ ನಾಗರಿಕನಾಗುವುದು ಸಾಧ್ಯವಿಲ್ಲ. ಸಂವಿಧಾನದ ಓದಿನಿಂದ ರಾಷ್ಟ್ರ , ಸಮಾಜ, ವ್ಯಕ್ತಿ , ಆರ್ಥಿಕ, ಸ್ವಾತಂತ್ರ್ಯ , ಬದುಕಿನ ಪ್ರಜ್ಞೆಯು ಬರುತ್ತದೆ. ಸಂವಿಧಾನ ಕೇವಲ ಕಾನೂನಿನ ಪುಸ್ತಕವಲ್ಲ. ಅದು ಆತ್ಮದ ಬೆಳಕು. ಆತ್ಮದ ಬೆಳಕೇ ನಮ್ಮ ಬದುಕಿನ ದಿಕ್ಸೂಚಿ. ಅಂಥ ಸತ್ಯದ ಬೆಳಕು ನಮ್ಮನ್ನು ಕರೆದೊಯ್ಯುತ್ತದೆ. ಅನ್ನ, ಅರಿವು, ಜಾಗೃತಿಯ ಹಕ್ಕನ್ನು ಅಂಬೇಡ್ಕರ್ ನಮಗೆ ನೀಡಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವ ಬಹು ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಂ. ಜಿ. ಹೆಗಡೆ ಮಾತನಾಡಿ, ಹಿಂದೆ ಮಾನವ ಬದುಕಿನ ಬೆಳಕಾಗಿ ಬಂದವರು ಬುದ್ಧ, ಬಸವಣ್ಣ, ಪ್ರಸ್ತುತ ನಮ್ಮ ಬದುಕಿನ ಬೆಳಕಾಗಿರುವುದು ಸಂವಿಧಾನ. ಈ ಬೆಳಕು ಎಲ್ಲರ ಮನೆ- ಮನಗಳಲ್ಲಿ ಬೆಳಗಬೇಕು. ಸಂವಿಧಾನ ನಮ್ಮ ಬದುಕಿನ ಕೈಪಿಡಿಯಾಗಿದೆ. ಅದನ್ನು ಉಳಿಸಲು ಸದಾ ನಾವು ಜಾಗೃತರಾಗಿರಬೇಕು ಎಂದರು.

ಉಪನ್ಯಾಸಕಿ ಲಾವಣ್ಯ ಗುಂಜಾಳ ವಂದಿಸಿದರು. ಡಾ. ಪ್ರೀತಿ ಪಡದಪ್ಪಗೋಳ ನಿರೂಪಿಸಿದರು. ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಗೂ ವಿವಿಧ ಕಾಲೇಜಿನ ಬೋಧಕವರ್ಗ, ರಾಚವಿ ಸಿಬ್ಬಂದಿಗಳು ಉಪಸ್ಥಿತರಿದ್ದರು.