ನವದೆಹಲಿ: ದಿನದ 24 ಗಂಟೆಯಲ್ಲಿ ಅತಿ ಹೆಚ್ಚು ಜೀವವಿಮಾ ಪಾಲಿಸಿ ನೋಂದಣಿ ಮಾಡಿಸುವ ಮೂಲಕ ಭಾರತೀಯ ಜೀವ ವಿಮಾ ನಿಗಮ (LIC) ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಿದೆ.

ಜ. 20ರಂದು ಒಂದೇ ದಿನದಲ್ಲಿ ನೋಂದಣಿಯಾದ ಪಾಲಿಸಿಗಳನ್ನು ಗಿನ್ನಿಸ್ ವಿಶ್ವ ದಾಖಲೆ ಪರಿಗಣಿಸಿದೆ ಎಂದು ಎಲ್‌ಐಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಜ.20 ರಂದು ಒಟ್ಟು 4,52,839 ಏಜೆಂಟರು 24 ಗಂಟೆಯೊಳಗೆ ದೇಶದಾದ್ಯಂತ 5,88,107 ಜೀವ ವಿಮೆಯನ್ನು ನೋಂದಾಯಿಸಿದ್ದಾರೆ. ಜಾಗತಿಕ ಜೀವ ವಿಮಾ ಕ್ಷೇತ್ರದಲ್ಲೇ ಇದೊಂದು ವಿಶಿಷ್ಟ ಸಾಧನೆ ಎಂದು ಗಿನ್ನಿಸ್ ಹೇಳಿದೆ.

‘ದೇಶವ್ಯಾಪಿ ಇರುವ ನಮ್ಮ ಶ್ರಮಿಕ ಏಜೆಂಟರ ಕೌಶಲ, ನಿರಂತರ ಪರಿಶ್ರಮ ಹಾಗೂ ಬದ್ಧತೆಯಿಂದ ಇದು ಸಾಧ್ಯವಾಗಿದೆ. ಈ ಸಾಧನೆಯು ನಮ್ಮ ಗ್ರಾಹಕರು ಮತ್ತು ಅವರ ಕುಟುಂಬದವರಿಗೆ ಅತ್ಯಗತ್ಯವಾದ ಹಣಕಾಸು ನೆರವು ನೀಡುವ ನಮ್ಮ ಬದ್ಧತೆಯ ಪ್ರತಿಫಲನವಾಗಿದೆ’ ಎಂದು ಎಲ್‌ಐಸಿ ಹೇಳಿದೆ.

‘ಜ. 20ರಂದು ‘ಮ್ಯಾಡ್ ಮಿಲಿಯನ್ ಡೇ’ ಅಡಿಯಲ್ಲಿ ಪ್ರತಿಯೊಬ್ಬ ಏಜೆಂಟ್ ಕನಿಷ್ಠ ಒಂದು ಪಾಲಿಸಿ ಮಾಡಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಅದರಂತೆ ನಮ್ಮ ಎಲ್ಲಾ ಗ್ರಾಹಕರು, ಏಜೆಂಟರು ಮತ್ತು ಸಂಸ್ಥೆಯ ನೌಕರರು ಇದನ್ನು ಸಾಧಿಸಿ ಇತಿಹಾಸ ನಿರ್ಮಿಸಿದ್ದಾರೆ’ ಎಂದು ಎಲ್‌ಐಸಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿದ್ದಾರ್ಥ ಮೊಹಂತಿ ಹೇಳಿದ್ದಾರೆ.