ಅಯೋಧ್ಯೆ :
ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ಕೆತ್ತಿದ ಮೂರ್ತಿ ರಾಮಲಲ್ಲಾ ಆಗಿ ಪ್ರತಿಷ್ಠಾಪನೆಗೊಳ್ಳಲು ಆಯ್ಕೆಯಾಗಿದೆ.

ದೇಶದ ಮೂವರು ಪ್ರಮುಖ ಶಿಲ್ಪಿಗಳಾದ ಮೈಸೂರಿನ ಅರುಣ್ ಯೋಗಿರಾಜ್, ಬೆಂಗಳೂರಿನ ಜಿ.ಎಲ್.ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರಿಗೆ ರಾಮಲಲ್ಲಾ ಮೂರ್ತಿಯನ್ನು ತಯಾರಿಸುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಮೂವರೂ ಶಿಲ್ಪಿಗಳು ತಮ್ಮ ಕಲ್ಪನೆಯ ರಾಮ ಲಲ್ಲಾನ ಮೂರ್ತಿಯನ್ನು ನಿರ್ಮಿಸಿ ಸಮರ್ಪಿಸಿದ್ದಾರೆ. ಇವುಗಳ ಪೈಕಿ ಯಾವುದನ್ನು ಆಯ್ಕೆ ಮಾಡಬೇಕು ಎಂಬುದಕ್ಕೆ ಸಂಬಂಧಿಸಿ ರಾಮ ಜನ್ಮಭೂಮಿ ಟ್ರಸ್ಟ್‌ನ ಸದಸ್ಯರ ನಡುವೆ ಮತದಾನ ನಡೆದು ಮೈಸೂರಿನ ಶಿಲ್ಪಿ ಯೋಗಿರಾಜ್‌ ಅವರ ಮೂರ್ತಿಯನ್ನು ಆಯ್ಕೆ ಮಾಡಲಾಯಿತು ಎಂದು ತಿಳಿದುಬಂದಿದೆ.

ಮೈಸೂರಿನ ಯೋಗಿ ಮನೆಯಲ್ಲಿ ಸಂಭ್ರಮ
ಶಿಲ್ಪಿ ಯೋಗಿರಾಜ್‌ ಅವರು ತಯಾರಿಸಿದ ಮೂರ್ತಿ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವುದು ಕುಟುಂಬದಲ್ಲಿ ಭಾರಿ ಸಂಭ್ರಮಕ್ಕೆ ಕಾರಣವಾಗಿದೆ. ಶಿಲ್ಪಿ ಅರುಣ್ ಯೋಗಿರಾಜ್ ಹೆಂಡತಿ ವಿಜೇತ ಅವರಂತೂ ಖುಷಿಯಿಂದ ಮಾತನಾಡಿ, ನಮ್ಮ ಮೂರ್ತಿಯೇ ಆಯ್ಕೆ ಯಾಗುತ್ತದೆ ಎಂಬ ನಿರೀಕ್ಷೆ ಇತ್ತು. ನನ್ನ ಪತಿಯವರು ಕಳೆದ ಆರು ತಿಂಗಳಿನಿಂದ ಮನೆಗೆ ಬಂದಿಲ್ಲ. ಪುಟ್ಟ ಮಗುವಿದೆ ನಮಗೆ. ಆದರೆ ಅವರು ರಾಮಲಲ್ಲಾನ ಮೂರ್ತಿಯನ್ನೇ ಮಗುವೆಂದು ಭಾವಿಸಿ ಕೆಲಸ ಮಾಡಿದ್ದಾರೆ ಎಂದು ಸಂತಸದಿಂದ ಹೇಳಿಕೊಂಡರು.