ಬೆಂಗಳೂರು : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್‌ಎಲ್‌ಯು) ಗೆ ಸಂಯೋಜಿತವಾಗಿರುವ ಕರ್ನಾಟಕದಾದ್ಯಂತ ಕಾನೂನು ಕಾಲೇಜುಗಳಲ್ಲಿ ನಡೆಯುತ್ತಿರುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಲ್ಲಿ ಒಂದು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿರುವುದು ಕಂಡುಬಂದಿದೆ. ಸೋರಿಕೆಯ ಬಗ್ಗೆ ತನಿಖೆ ನಡೆಸುವಂತೆ ಕೋರಿ ವಿಜಿಲೆನ್ಸ್ ಸ್ಕ್ವಾಡ್‌ನ ಸದಸ್ಯರೊಬ್ಬರು ಇತ್ತೀಚೆಗೆ ನಗರ ಸೈಬರ್ ಅಪರಾಧ ಪೊಲೀಸರಿಗೆ ದೂರು ನೀಡಿದ್ದಾರೆ.

ಜನವರಿ 23 ರಂದು ಪ್ರಾರಂಭವಾದ ಕಾಂಟ್ರಾಕ್ಟ್ 1 ವಿಷಯದ ಪರೀಕ್ಷೆಗೆ ಮುನ್ನ, ಪ್ರಶ್ನೆ ಪತ್ರಿಕೆಯಲ್ಲಿ ಆ ಪ್ರಶ್ನೆಗಳು ಕಾಣಿಸಿಕೊಂಡಿವೆಯೇ ಎಂದು ಪರಿಶೀಲಿಸಲು ಪರೀಕ್ಷಕರಲ್ಲಿ ಒಬ್ಬರು ಕಾಂಟ್ರಾಕ್ಟ್ 1 ಪತ್ರಿಕೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕಳುಹಿಸಿದ್ದರು ಎಂದು ವಿಜಿಲೆನ್ಸ್ ಸ್ಕ್ವಾಡ್ -2 ರ ಸದಸ್ಯ ವಿಶ್ವನಾಥ ಕೆಎನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಪರಿಶೀಲಿಸಿದಾಗ, ಪ್ರಶ್ನೆಗಳು ಒಂದೇ ಆಗಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸೋರಿಕೆಯ ಮೂಲವನ್ನು ಕಂಡುಹಿಡಿಯಲು ಪೊಲೀಸರು ತನಿಖೆ ಆರಂಭಿಸಿದ್ದು, ಕೆಲವು ಶಂಕಿತರನ್ನು ಬಂಧಿಸಿದ್ದಾರೆ.

ಕಾನೂನು ವಿ.ವಿ | ಪ್ರಶ್ನೆಪತ್ರಿಕೆ ಸೋರಿಕೆ ದೃಢಪಟ್ಟರೆ ಮರುಪರೀಕ್ಷೆ: ಕುಲಸಚಿವೆ

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ನಡೆಸಿದ್ದ ಕಾನೂನು ಪದವಿ ಕೋರ್ಸ್‌ನ ಮೊದಲ ಸೆಮಿಸ್ಟರ್‌ನ ಕಾಂಟ್ರಾಕ್ಟ್‌–1 ವಿಷಯದ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ತನಿಖೆ ನಡೆಯುತ್ತಿದ್ದು, ಸೋರಿಕೆಯಾಗಿರುವುದು ದೃಢಪಟ್ಟರೆ ವಿಶ್ವವಿದ್ಯಾಲಯದ ನಿಯಮಾವಳಿ ಪ್ರಕಾರ ಮರುಪರೀಕ್ಷೆ ನಡೆಸಲಾಗುವುದು ಎಂದು ವಿಶ್ವವಿದ್ಯಾಲಯದ ಕುಲಸಚಿವೆ (ಮೌಲ್ಯಮಾಪನ) ರತ್ನಾ ಭರಮಗೌಡರ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ತಿಂಗಳು 23ರಂದು ಕಾಂಟ್ರಾಕ್ಟ್‌–1 ವಿಷಯದ ಪರೀಕ್ಷೆ ನಡೆದಿತ್ತು. ಬೆಂಗಳೂರಿನ ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷೆ ಆರಂಭಗೊಳ್ಳುವುದಕ್ಕಿಂತ 45 ನಿಮಿಷಗಳ ಮೊದಲು ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಕೈಬರಹದಲ್ಲಿ ಬರೆದ ಕೆಲವು ಪ್ರಶ್ನೆಗಳು ಸೋರಿಕೆಯಾಗಿರುವುದು ಕಂಡುಬಂದಿತ್ತು. ಅಂದಾಜು ಶೇ 50ರಿಂದ ಶೇ 60ರಷ್ಟು ಪ್ರಶ್ನೆಗಳಲ್ಲಿ ಸಾಮ್ಯತೆ ಇದ್ದವು’ ಎಂದು ತಿಳಿಸಿದರು.

ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಬೆಂಗಳೂರು ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದ್ದು, ತನಿಖಾ ವರದಿ ಆಧರಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ. ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 130 ಕಾಲೇಜುಗಳಿದ್ದು, 116 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿವೆ. ಸುಮಾರು 50,000 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆ. ಪ್ರಸ್ತುತ ಇನ್ನಿತರ ವಿಷಯಗಳ ಪರೀಕ್ಷೆಗಳು ನಡೆದಿದ್ದು, ಅವುಗಳ ಮೇಲೆ ಗಮನ ಹರಿಸಬೇಕು ಎಂದು ಹೇಳಿದರು.

ಆರೋಪಿ ವಶ: ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಆರೋಪಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ನಡೆಯುತ್ತಿದ್ದು, ತನಿಖೆ ಪೂರ್ಣಗೊಂಡ ನಂತರ ಬರುವ ವರದಿಯನ್ನು ಆಧರಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು. ಇನ್ನುಳಿದ ಎಲ್ಲ ಪರೀಕ್ಷೆಗಳು ವೇಳಾಪಟ್ಟಿಯಂತೆ ನಡೆಯುತ್ತಿವೆ. ವಿದ್ಯಾರ್ಥಿಗಳು ಅನಾವಶ್ಯಕ ಗೊಂದಲಕ್ಕೆ ಒಳಗಾಗಬಾರದು’ ಎಂದು ಕುಲಸಚಿವೆ (ಆಡಳಿತ) ಅನುರಾಧಾ ವಸ್ತ್ರದ ಹೇಳಿದರು.

ಟೆಲಿಗ್ರಾಮ್‌ ಗ್ರೂಪ್‌ನಲ್ಲಿ ಸುಳಿವು: ರಾಜ್ಯದ ವಿವಿಧ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳು ಸೇರಿಕೊಂಡು, ಕೆಎಸ್‌ಎಲ್‌ಯು ಲಾ ನೋಟ್ಸ್‌ (ಕನ್ನಡ ಅಂಡ್‌ ಇಂಗ್ಲಿಷ್‌)’ ಟೆಲಿಗ್ರಾಮ್‌ ಗ್ರೂಪ್‌ ರಚಿಸಿಕೊಂಡಿದ್ದಾರೆ. ಈ ಗ್ರೂಪ್‌ನಲ್ಲಿ ‘…ಎಲ್‌.ಎಲ್‌.ಬಿ ಪ್ರಶ್ನೆ ಪತ್ರಿಕೆ ಬೇಕಿದ್ದರೆ ಅಥವಾ ಒಂದೇ ಸಾರಿ ಪಾಸಾಗಬೇಕಿದ್ದರೆ ಬೆಂಗಳೂರಿನ ಮಹಾವಿದ್ಯಾಲಯದ ಸಿಬ್ಬಂದಿಯನ್ನು ಸಂಪರ್ಕಿಸಿ’ ಎಂದು ‘ಅರ್ಜುನ’ ಎನ್ನುವ ಹೆಸರಿನಿಂದ ಸಂದೇಶವೊಂದು ಜ.21ರಂದು ಬಂದಿತ್ತು.

ಇನ್ನೊಂದೆಡೆ, ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಮೆಸೇಜ್‌ ಹಾಕಲಾಗಿದೆ ಎಂದು ಬೆಂಗಳೂರು ಕಾಲೇಜ್‌ವೊಂದರ ಮಹಿಳಾ ಶಿಕ್ಷಕಿಯು ಪೊಲೀಸ್ ಠಾಣೆಯಲ್ಲಿ ಜ.22ರಂದು ದೂರು ದಾಖಲಿಸಿದ್ದಾರೆ.

ವಿಶ್ವವಿದ್ಯಾಲಯದ ಕುಲಪತಿಯವರ ನಿರ್ದೇಶನದ ಮೇರೆಗೆ ಪ್ರಕರಣವನ್ನು ಪರಿಶೀಲಿಸಿದ ಬೆಂಗಳೂರು ವಲಯದ ಸ್ಕ್ವಾಡ್‌ ಟೀಮ್‌ ಮುಖ್ಯಸ್ಥ ವಿಶ್ವನಾಥ ಕೆ.ಎನ್‌ ಅವರು ಸೋರಿಕೆಯಾದ ಪ್ರಶ್ನೆಗಳು ಹಾಗೂ ನಿಜವಾದ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳಿಗೆ ಸಾಮ್ಯತೆ ಇವೆ ಎಂದು ದೃಢಪಡಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯನ್ನು ತನಿಖೆ ಮಾಡುವಂತೆ ಜ.23ರಂದು ಬೆಂಗಳೂರಿನ ಸೈಬರ್‌ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದಾರೆ. ಒಟ್ಟಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದೂರುಗಳು ದಾಖಲಾಗಿವೆ.