ಬೆಳಗಾವಿ: ಈ ಸಲದ ಲೋಕಸಭೆ ಚುನಾವಣೆಯಲ್ಲಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧೆ ಮಾಡುವದಿಲ್ಲ.ಸಾಮಾನ್ಯ ಕಾರ್ಯಕರ್ತರಿಗೆ ಚಿಕ್ಕೋಡಿ ಭಾಗದಿಂದ ಟಿಕೆಟ್‌ ಕೊಡಬೇಕು ಎಂಬ ನಿರ್ಧಾರ ಮಾಡಲಾಗಿದೆ. ಆದ್ದರಿಂದ ಈ ಭಾರಿ ಲೋಕಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧಿಸಲ್ಲ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿಕ್ಕೋಡಿ ಕಾಂಗ್ರೆಸ್ ನಲ್ಲಿ ಸಾಕಷ್ಟು ಜನ ಆಕಾಂಕ್ಷಿಗಳಿದ್ದಾರೆ. ಉದಾಹರಣೆಗೆ ಚಿಂಗಳೆ, ಬುಟಾಳೆ, ಗಜಾನನ ಇದ್ದಾರೆ. ಅಲ್ಲದೇ ಕ್ರೀಯಾಶೀಲ ಕಾರ್ಯಕರ್ತರು ಇರುವಾಗ ಈ ಭಾಗದಲ್ಲಿ ನಮ್ಮ ಕುಟುಂಬದಿಂದ ಯಾರು ಸ್ಪರ್ಧೆ ಮಾಡುವದಿಲ್ಲ ಎಂದ ಅವರು, ಬೆಳಗಾವಿ ಹಾಗೂ ಚಿಕ್ಕೋಡಿ ಭಾಗದಲ್ಲಿ ಯಾರಿಗೆ ಟಿಕೆಟ್‌ ಕೊಡಬೇಕು ಎಂದು ಈಗಾಗಲೇ ಎರಡು ಕ್ಷೇತ್ರಕ್ಕೆ ಇಬ್ಬಿಬ್ಬರ ಹೆಸರು ಪೈನಲ್‌ ಮಾಡಲಾಗಿದೆ. ಅಂತಿಮ ತಿರ್ಮಾಣವನ್ನು ಹೈ ಕಮಾಂಡ್‌ ತೆಗೆದುಕೊಳ್ಳಲಿದೆ ಎಂದರು.
ಈ ಲೋಕಸಭಾ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಅವರನ್ನು ನಿಲ್ಲಿಸಿದರೆ ಇತರರ ಹಾದಿಗಳು ಸುಗಮವಾಗುತ್ತವೆ ಎಂಬ ಮಾತುಗಳು ಜಿಲ್ಲೆಯಲ್ಲಿ ಹರಿದಾಡುತ್ತಿವೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು. ನನ್ನನ್ನು ಕಣಕ್ಕೆ ಇಳಿಸಬೇಕು ಎಂಬ ಚರ್ಚೆ ನಡೆದಿರುವುದು ಸತ್ಯ. ಆದರೆ ನಿಷ್ಠಾವಂತ ಕಾರ್ಯಕರ್ತರಿಗೂ ಅವಕಾಶ ನೀಡಬೇಕೆಂಬ ಉದ್ದೇಶದಿಂದ ನಾನು ಕಣಕ್ಕೆ ಇಳಿಯುತ್ತಿಲ್ಲ ಎಂದು ಸ್ಪಷ್ಟ ಪಡಿಸಿದರು.
ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರಕ್ಕಿಂತ ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ಚರ್ಚೆ: ಲೋಕಸಭಾ ಚುನಾವಣೆ ನಿಮಿತ್ತ ಬೆಳಗಾವಿ ಹಾಗೂ ಚಿಕ್ಕೋಡಿ ಭಾಗದ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ನಡೆಯುತ್ತಿದಿಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಾತಿ ಲೆಕ್ಕಾಚಾರ ಆಮೇಲೆ, ಮೊದಲು ಇಲ್ಲಿ ಏನೆ ಇದ್ದರೂ ಗೆಲ್ಲುವ ಅಭ್ಯರ್ಥಿ ಹಾಗೂ ಯಾರು ಪೊಪ್ಯುಲರ್‌ ಇದ್ದಾರೋ ಅವರ ಬಗ್ಗೆ ಚರ್ಚೆ ನಡೆಯುತ್ತದೆ. ಆಮೇಲೆ ಜಾತಿ ಲೆಕ್ಕಾಚಾರ ನಡೆಯುತ್ತದೆ ಎಂದ ಅವರು, ನಮ್ಮ ಡ್ಯೂಟಿ ಎರಡು ಕ್ಷೇತ್ರಕ್ಕೆ ಹೆಸರು ಪಟ್ಟಿ ಮಾಡುವುದು ಅಷ್ಟೆ, ಮುಖ್ಯವಾಗಿ ಎರಡು ಕ್ಷೇತ್ರದಲ್ಲಿ ಸಚಿವೆ ಲಕ್ಷ್ಮೀ ಅವರ ಮಗನ ಹೆಸರಿದ್ದು, ಸರ್ವೇಯಲ್ಲಿ ಯಾರ ಹೆಸರು ಬರುತ್ತದೆಯೋ ಅವರನ್ನೇ ಅಂತಿಮವಾಗಿ ಕಣಕ್ಕೇ ಇಳಿಸಲಾಗುವುದು ಎಂದರು.

ಅಕ್ರಮ ತಿನಿಸು ಕಟ್ಟೆ ಮಳಿಗೆಗಳ ಬಗ್ಗೆ ತನಿಖೆ ಯಾವ ಹಂತಕ್ಕೆ ಬಂದಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿರುವ ತಿನಿಸು ಕಟ್ಟೆ ಅಕ್ರಮ ಮಳಿಗೆ ನಿರ್ಮಾಣದ ತನಿಖೆ ಒಂದು ಹಂತಕ್ಕೆ ಬಂದಿದೆ. ಅಧಿಕಾರ ಮಟ್ಟದಲ್ಲಿ ಸಹ ಚರ್ಚಿಸಿ ನೋಟಿಸ್‌ ನೀಡಲಾಗಿದೆ. ಅವರಿಂದ ಉತ್ತರ ನೋಡುತ್ತಿದ್ದೆವೆ. ಸರ್ಕಾರದ ಮಟ್ಟದಲ್ಲಿ ಕಾನೂನು ತೊಡಕುಗಳಿಗೆ ಇರುವುದು ಸಾಮಾನ್ಯ, ಒದೊಂದೇ ಪರಿಹಾರ ಮಾಡುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಕ್ಷೇತ್ರದಲ್ಲಿ ನಡೆಯುತ್ತಿದೆ ಚುನಾವಣಾ ತಯಾರಿ: ಎರಡು ಕ್ಷೇತ್ರದಲ್ಲಿ ಅಭ್ಯರ್ಥಿಗಳ ಗೆಲುವುವಿಗೆ ಬೂತಮಟ್ಟದ ಸಭೆಗಳನ್ನು ಮಾಡಲಾಗುತ್ತಿದೆ. ನಮ್ಮ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳ ಜಾಗೃತಿ ಮೂಡಿಸುವ ಮುಟ್ಟಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಲಿದ್ದಾರೆ. ಇನ್ನು ಒಂದು ವಾರದಲ್ಲಿ ಅಂತಿಮವಾಗಿ ಅಭ್ಯರ್ಥಿಗಳ ಘೋಷಣೆಯಾಗಲಿದೆ ಎಂದರು.
ಹೊಸ ಪೀಳಿಗೆ ಬರಲು ಹೊಸಬರಿಗೆ ಅವಕಾಶ: ಚಿಕ್ಕೋಡಿ ಕ್ಷೇತ್ರದಲ್ಲಿ ಹೊಸ ಪೀಳಿಗೆ ಬರಲು ಹೊಸಬರಿಗೆ ಅಂದರೆ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡಲಾಗುತ್ತಿದೆ. ಕ್ಷೇತ್ರದಲ್ಲಿ ಹಳಬ್ರೆ ನಾಯಕನಾಗುತ್ತಾ ಹೊರಟರೇ ಹೇಗೆ. ಮುಂದೊಂದು ದಿನ ಹೊಸ ಪೀಳಿಗೆ ಬರಬೇಕಲ್ವಾ ಎಂದ ಅವರು, ಹೊಸ ಪೀಳಿಗೆ ಬರಲು ಹೊಸಬರಿಗೆ ಅವಕಾಶ ನೀಡಲಾಗುವುದು. ಮುಖ್ಯವಾಗಿ ನಮ್ಮ ಕ್ಷೇತ್ರದಲ್ಲಿ ಈ ಭಾರಿ ಮಹಿಳೆಯರಿಗೆ ಅವಕಾಶವಿಲ್ಲ ಎಂದು ಸ್ಪಷ್ಟ ಪಡಿಸಿದರು.