ಮಡಾಮಕ್ಕಿ: ಮಡಾಮಕ್ಕಿ ಶ್ರೀ ವೀರಭದ್ರ ಸ್ವಾಮಿ ದೇವರ ಜಾತ್ರೋತ್ಸವ ಫೆಬ್ರವರಿ 8 ರಂದು ನಡೆಯಲಿದೆ. ಇಡೀ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ಕೆಂಡ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

8 ರಂದು ಬೆಳಗ್ಗೆ ಗಣೇಶ ಪ್ರಾರ್ಥನೆ, ಪುಣ್ಯಾಹ, ನವಕ ಪ್ರಧಾನ ಹೋಮ ಕಲಶ, ಶತ ರುದ್ರಾಭೀಷೇಕ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, 12.30 ಕ್ಕೆ ತುಲಾಭಾರ ಸೇವೆ, 1 ರಿಂದ ಅನ್ನಸಂತರ್ಪಣೆ, ರಾತ್ರಿ 8 ಕ್ಕೆ ಕೆಂಡ ಸೇವೆಗೆ ಅಗ್ನಿ ಸ್ಪರ್ಶ, ಯಕ್ಷಗಾನ ಸೇವೆ, 9 ರಿಂದ ಶ್ರೀ ಸ್ವಾಮಿ ಹಾಗೂ ಅಮ್ಮನವರ ದರ್ಶನ, ಕೆಂಡ ಸೇವೆ, ಪರಿವಾರ ದೈವಗಳ ಕೋಲ, ದರ್ಶನ, 1.30 ರಿಂದ ರಂಗ ಪೂಜೆ, ಢಮರು ಸೇವೆ, ವ್ಯಾಘ್ರ ಚಾಮುಂಡಿ ದರ್ಶನ, ಸುತ್ತು ಬಲಿ, ಸ್ವಾಮಿ ದರ್ಶನ, ಪ್ರಸಾದ ವಿತರಣೆ ನಡೆಯಲಿದೆ.

ಪುರಾತನ ಕಾಲದಲ್ಲಿ ರಕ್ಕಸರ ಅಟ್ಟಹಾಸ
ಹೆಚ್ಚಿದಾಗ ವೃಷಭಯೋಗೇಶ್ವರ ಮುನಿ ಶಿವನನ್ನು ಕುರಿತು ತಪಸ್ಸು ಮಾಡಿದಾಗ ಶಿವಪುತ್ರ ವೀರಭದ್ರ ಪ್ರತ್ಯಕ್ಷನಾಗಿ ರಕ್ಕಸರನ್ನು ಕಂಡು ಕೋಪೋದ್ರಿಕ್ತನಾಗಿ ತನ್ನ ತಲೆಯನ್ನು ಸಮೀಪದ ದೊಡ್ಡ ಶಿಲೆಗೆ ಬಡಿದನಂತೆ. ಬಡಿತಕ್ಕೆ ಶಿಲೆ ಚೂರು ಚೂರಾಗಿ ಸಿಡಿದು ಅರ್ಧ ಚಂದ್ರಾಕೃತಿಯ ಒಂದು ಶಿಲೆಯನ್ನು ವೃಷಭಯೋಗೇಶ್ವರ ಮುನಿ ತಂದು ಮಡಾಮಕ್ಕಿ ಸಮೀಪದ ದೊಡ್ಡ ಬಾವಿಯಲ್ಲಿ ಮಡಾಮಕ್ಕಿ, ಬೇಳಂಜೆ ಸಂಸ್ಥಾನಗಳ ರಾಜರ ರತ್ನ ವೈಡೂರ್ಯಾದಿಗಳನ್ನು ತಂದು ಬಾವಿಯಲ್ಲಿ ಹಾಕಿ ಭದ್ರಗೊಳಿಸಿ ಅದಕ್ಕೆ ಮಣ್ಣಿನಕಟ್ಟೆ ಕಟ್ಟಿ ಅದರ ಮೇಲೆ ತಂದ ಶಿಲೆ ಪ್ರತಿಷ್ಠಾಪನೆ ಮಾಡಿದನೆಂದು ಪುರಾಣದಲ್ಲಿ ಉಲ್ಲೇಖವಿದೆ. ವೀರಭದ್ರ ಮೊಣಕಾಲನ್ನು ಊರಿ ನೆಲೆಯಾದ ಸ್ಥಳದ ಊರಿಗೆ ಮಡಾಮಕ್ಕಿ ಎಂಬ ಹೆಸರು ಬಂದಿದೆ. ಕ್ಷೇತ್ರಕ್ಕೆ ಕೋಟೆರಾಯ ಪರಿವಾರಗಳು ದೇವಗಣಗಳು ರಕ್ಷಣೆಯಲ್ಲಿದೆ ಎಂದು ಪ್ರತೀತಿ. ಇಲ್ಲಿ ಅರ್ಧಚಂದ್ರಾಕೃತಿಯ ಶಿಲೆಯೇ ವೀರಭದ್ರನ ದಿವ್ಯ ಸಾನ್ನಿಧ್ಯ.
ವೀರಭದ್ರ ನೆಲೆನಿಂತ ಮಣ್ಣಿನ ಕಟ್ಟೆಯ ಮಣ್ಣು(ಮೃತ್ತಿಕೆ) ಪ್ರಸಾದ ರೂಪವಾಗಿ ಭಕ್ತರಿಗೆ ಹಂಚುವುದು ವಿಶೇಷ.

ಪ್ರದಕ್ಷಿಣೆ ವಿಶೇಷ: ಜಾತ್ರಾ ಮಹೋತ್ಸವ, ಕೆಂಡ ಸೇವೆ
ದಿನದಂದು ತುಲಾಭಾರ ಸೇವೆ ಹಾಗೂ ಇನ್ನಿತರ ಸೇವೆ, ಮಹಾ ಅನ್ನಸಂತರ್ಪಣೆ, ರಾತ್ರಿ ಕ್ಷೇತ್ರದ ಮೇಳದಿಂದ ಯಕ್ಷಗಾನ ನೃತ್ಯಸೇವೆ, ವೀರಭದ್ರ ಸ್ವಾಮಿ, ಬನಶಂಕರಿ ದೇವಿಯ ದರ್ಶನ, ಕೆಂಡಸೇವೆ, ರಂಗಪೂಜೆ,
ಢಮರುಸೇವೆ, ಪರಿವಾರ ದೇವತೆಗಳ ಕೋಲ ಸೇವೆ. ವೀರಭದ್ರ ಸ್ವಾಮಿ ದರ್ಶನದಲ್ಲಿ ಪಾತ್ರಿ ಚೂಪಾದ ಮುಳ್ಳಿನ ಪಾದುಕೆಯನ್ನು ಧರಿಸಿ ವೀರಭದ್ರನ ಮಣ್ಣಿನ ಕಟ್ಟೆಯ(ಸನ್ನಿಧಾನ)ವನ್ನು ಪ್ರದಕ್ಷಿಣೆ ಬರುವುದು ಕ್ಷೇತ್ರದಲ್ಲಿ ನಡೆಯುತ್ತಾ ಬಂದಿರುವುದು ವಿಶೇಷ.

ಪಶ್ಚಿಮಘಟ್ಟಗಳ ರಮಣೀಯ ಪ್ರಕೃತಿ ಸೌಂದರ್ಯದ ನಡುವೆ ಇದೆ ಶ್ರೀಕ್ಷೇತ್ರ ಮಡಾಮಕ್ಕಿ. ಪಶ್ಚಿಮಘಟ್ಟಗಳ ತಪ್ಪಲಿನಲ್ಲಿ ಇರುವ ಸುಂದರ ತಾಣ.
ಗರ್ಭಗುಡಿ ಬಯಸದೇ ಕಷ್ಟವೆಂದು ಬಂದಾಗ ಭಕ್ತಾದಿಗಳನ್ನು ನಿರಾಸೆಗೊಳಿಸದೆ ಇಷ್ಟಾರ್ಥ ಪೂರೈಸಿ, ಭಕ್ತರ ಹೃದಯಸಾಗರದಲ್ಲಿ ನೆಲೆನಿಂತ ದೇವ ವೀರಭದ್ರ. ಈ ಕ್ಷೇತ್ರ ಕಾರಣೀಕ, ಪವಿತ್ರ ಹಾಗೂ ಪುರಾತನವಾಗಿದೆ.

ದಕ್ಷಪ್ರಜಾಪತಿ ಯಾಗದ ಸಂದರ್ಭದಲ್ಲಿ ಯಾಗಶಾಲೆಯಲ್ಲಿ ಸತಿದೇವಿಗೆ ಗೌರವ ಸಿಗದೆ, ನಿರೀಶ್ವರ ಯಾಗ ಕೈಗೊಂಡ ತಂದೆಯ ಮೇಲೆ ಕುಪಿತಗೊಂಡು ಅಗ್ನಿಕುಂಡ ರಚಿಸಿ
ಬೆಂಕಿಗಾಹುತಿಯಾಗುತ್ತಾಳೆ. ಇದರಿಂದ ಕುಪಿತನಾದ ಶಿವ ತಲೆಯ ಕೂದಲನ್ನು ನೆಲಕ್ಕೆ ಅಪ್ಪಳಿಸಿದಾಗ ಉದ್ಭವಿಸಿ, ದಕ್ಷನ ಸಂಹಾರ ಮಾಡಿದವನೇ ವೀರಭದ್ರ. ಯುಗಾಂತರದಲ್ಲಿ ಭಕ್ತರ ಭಕ್ತಿಗೆ ಮಣಿದು ಮೊಣಕಾಲೂರಿ ಭಕ್ತರನ್ನು ಉದ್ಧರಿಸಿದ ದೇವರು ಮಡಾಮಕ್ಕಿಯ ಶ್ರೀ ವೀರಭದ್ರಸ್ವಾಮಿ.

ಮಡಾಮಕ್ಕಿಯ ವಿಶೇಷ: ಸುಮಾರು 2000 ವರ್ಷಗಳ ಅಪರೂಪದ ಹಿನ್ನೆಲೆ ಹೊಂದಿರುವ ಮಡಾಮಕ್ಕಿ ಕ್ಷೇತ್ರ ಗುಡಿ ಇಲ್ಲದ ವೀರಭದ್ರಸ್ವಾಮಿ
ಮೊಣಕಾಲೂರಿ (ಮಡವೂರಿದ ಸ್ಥಳವೇ ಮಡಾಮಕ್ಕಿ) ಭಕ್ತಸಮೂಹವನ್ನು ಪೊರೆಯುತ್ತಿರುತ್ತಾನೆ.

ಬನಶಂಕರಿ, ಪಡಿಕಂತಾಯ ಪಂಚಮುಖನಂದಿ, ಚಿಕ್ಕು, ಯಕ್ಷಿ, ಹ್ಯಾಗುಳಿ, ಬೊಬ್ಬರ್ಯ, ಮಹಿಷಂತಾಯ, ನಾಗ, ಪಂಚಬೊಬ್ಬರ್ಯ, ಹುಲಿದೇವರು, ಕಲ್ಲುಕುಟಿಕ, ಖಡ್ಗರಾವಣ ಒಳ ಆವರಣದಲ್ಲಿ ರಾರಾಜಿಸುತ್ತಿದ್ದರೆ, ಕಲ್ಲುಕುಟಿಕ, ಪಡಿಘಂತಾಯ, ಪಂಜುರ್ಲಿ, ವರ್ತೆ, ಜುಮಾದಿ ದೈವಗಳು ಹೊರಾಂಗಣದಲ್ಲಿ ಭಕ್ತರ ರಕ್ಷಣೆ ಮಾಡುತ್ತಿದ್ದಾರೆ. ಮಕರಮಾಸ 25(ಫೆಬ್ರವರಿ 8) ರಂದು ಊರಿನ ಜಾತ್ರೆ ನಡೆಯುತ್ತದೆ.

ಗಂಡುಕತ್ರಿಯನ್ನು ಕುತ್ತಿಗೆಗೆ ಹಾಕಿಕೊಂಡು, ಕಬ್ಬಿಣದ ಮುಳ್ಳುಗಳಿರುವ ಪಾದುಕೆಯ ಪ್ರದಕ್ಷಿಣೆ ಸೇವೆ ಇಲ್ಲಿಯ ವಿಶೇಷತೆ. ಪರಿವಾರ ದೈವಗಳ ಕೋಲ, ನಾಗನಿಗೆ ಹಾಲಿಟ್ಟು ಸೇವೆ, ತುಲಾಭಾರ, ಕೆಂಡಸೇವೆ, ಅನ್ನದಾನ, ರಂಗಪೂಜೆ, ಡಮರುಸೇವೆ, ಹುಲಿದೇವರ ದರ್ಶನ ಸೇವೆಗಳು ಜಾತ್ರಾ ಸಂದರ್ಭದಲ್ಲಿ ನಡೆಯುತ್ತದೆ. ದೇವಳದಲ್ಲಿ ನಡೆಯುವ ದರ್ಶನ ಸೇವೆ ವಿಶಿಷ್ಟವಾದುದು. ವೀರಭದ್ರ ದರ್ಶನ ಪಾತ್ರಿ ಚೂಪಾದ ಕಬ್ಬಿಣದ ಪಾದುಕೆ ಧರಿಸಿ, ದೇವರ ಸುತ್ತು ಬರುವುದು ಆಕರ್ಷಣೆಯಾಗಿದೆ.

1989ರಲ್ಲಿ ಮಡಾಮಕ್ಕಿ ಮೇಳ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಿ. ಕೆ. ಬೋಜ ಶೆಟ್ಟಿ ಅವರ ಯಜಮಾನಿಕೆಯಲ್ಲಿ ಹೆಬ್ರಿ ಚಂದ್ರಶೇಖರ ಹೆಗ್ಡೆ ಮತ್ತು ಮಧುಕರ ಶೆಟ್ಟಿ ಇವರ ಮಾರ್ಗದರ್ಶನಲ್ಲಿ ಯಕ್ಷಗಾನ ಮೇಳ ಆರಂಭವಾಗಿತ್ತು. ಮಡಾಮಕ್ಕಿ ಮೇಳದ ಯಕ್ಷಗಾನ ಈಗ ಬಹಳ ಪ್ರಸಿದ್ಧಿ ಪಡೆದುಕೊಂಡಿದೆ.