ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜಾರಿ ನಿರ್ದೇಶನಾಲಯ (ED) ಪ್ರಕರಣ ದಾಖಲಿಸಿದೆ.

ಜಾರಿ ನಿರ್ದೇಶನಾಲವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣದಡಿ ದಾಖಲಿಸಿದ್ದು, ಇದರಿಂದ ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಈಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಗಳೂರಿನ ವಿಶೇಷ ನ್ಯಾಯಾಲಯದ ನಿರ್ದೇಶನದ ಮೇರೆಗೆ ರಾಜ್ಯದ ಲೋಕಾಯುಕ್ತ ಪೊಲೀಸರು ಸೆಪ್ಟೆಂಬರ್ 27 ರಂದು ಸಿದ್ದರಾಮಯ್ಯ ಮತ್ತು ಇತರ ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಈಗ ಇ.ಡಿ.ಪ್ರಕರಣ ದಾಖಲಿಸಿದೆ. ಇ.ಡಿ.ಯು ಇಸಿಐಆರ್ (ಎನ್‌ಫೋರ್ಸ್‌ಮೆಂಟ್‌ ಕೇಸ್‌ ಇನ್ಫರ್ಮೇಷನ್‌ ರಿಪೋರ್ಟ್‌) ದಾಖಲಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇ.ಡಿ. ಕಾರ್ಯವಿಧಾನದ ಪ್ರಕಾರ, ಆರೋಪಿಗಳನ್ನು ವಿಚಾರಣೆಗೆ ಕರೆಸಿಕೊಳ್ಳಲು ಮತ್ತು ತನಿಖೆಯ ಸಮಯದಲ್ಲಿ ಅವರ ಆಸ್ತಿಯನ್ನು ಲಗತ್ತಿಸಲು ಇ.ಡಿ.ಗೆ ಅಧಿಕಾರವಿದೆ.

ಮುಡಾ ಪ್ರಕರಣದಲ್ಲಿ ಲೋಕಾಯುಕ್ತದ ಎಫ್‌ಐಆರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ದೇವರಾಜು ಹೆಸರು ಉಲ್ಲೇಖಿಸಲಾಗಿತ್ತು. ದೇವರಾಜು ಅವರಿಂದ ಮಲ್ಲಿಕಾರ್ಜುನ ಸ್ವಾಮಿ ಜಮೀನು ಖರೀದಿಸಿ ಅದನ್ನು ಪಾರ್ವತಿ ಅವರಿಗೆ ಉಡುಗೊರೆಯಾಗಿ ನೀಡಿದ್ದರು ಎಂದು ಹೇಳಲಾಗಿದೆ.
ಸಿದ್ದರಾಮಯ್ಯ ಕಳೆದ ವಾರ ಮುಡಾ ವಿಷಯದಲ್ಲಿ ತಮ್ಮನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ನ್ಯಾಯಾಲಯ ತನ್ನ ವಿರುದ್ಧ ತನಿಖೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ಮುಡಾ ಪ್ರಕರಣದಲ್ಲಿ ತಾನು ಯಾವುದೇ ತಪ್ಪು ಮಾಡಿಲ್ಲದ ಕಾರಣ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ ಹಾಗೂ ಪ್ರಕರಣದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಪ್ರತಿಪಾದಿಸಿದ್ದಾರೆ.