ಬೆಳಗಾವಿ :
ಮಾಜಿ ಉಪ ಮುಖ್ಯಮಂತ್ರಿ ಹಾಗೂ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರನ್ನು ಬಿಜೆಪಿಗೆ ಕರೆ ತರಬೇಕು ಎಂಬ ಚರ್ಚೆ ಎಲ್ಲೆಡೆ ಜೋರಾಗಿ ನಡೆದಿದೆ.
ಈ ನಡುವೆ ಅವರನ್ನು ಮತ್ತೆ ಬಿಜೆಪಿಗೆ ಕರೆತಂದು ಲೋಕಸಭಾ ಚುನಾವಣೆಗೆ ಕಣಕ್ಕಿಳಿಸಬೇಕು ಎಂಬ ಪ್ರಯತ್ನವೂ ಸಹ ನಡೆದಿದೆ ಎನ್ನಲಾಗಿದೆ. ಇದೀಗ ದೂರದ ಬೀದರ್ ಲೋಕಸಭಾ ಮತಕ್ಷೇತ್ರಕ್ಕೆ ಲಕ್ಷ್ಮಣ ಸವದಿ ಅವರ ಹೆಸರು ಬಲವಾಗಿ ಕೇಳಿ ಬಂದಿದ್ದು ಅಲ್ಲಿನ ಹಾಲಿ ಲೋಕಸಭಾ ಸದಸ್ಯರ ಬಗೆಗಿನ ಸ್ಥಳೀಯ ಶಾಸಕರ ಭಿನ್ನಮತವೇ ಇದೀಗ ಸವದಿ ಅವರನ್ನು ಬೀದರ್ ನಲ್ಲಿ ಕಣಕ್ಕಿಳಿಸುವ ಬಗೆಗಿನ ಚರ್ಚೆಗೆ ಕಾರಣವಾಗಿದೆ.
ಈಗಾಗಲೇ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು ಸವದಿ ಅವರೊಂದಿಗೆ ಮಾತುಕತೆಯನ್ನೂ ನಡೆಸಿದ್ದು, ಸತತ ಸಂಪರ್ಕದಲ್ಲಿದ್ದು ಮನವೊಲಿಸುವ ಮುಂದುವರೆಸಿದ್ದಾರೆ.
ಬೀದರ್ ಲೋಕಸಭಾ ಕ್ಷೇತ್ರದ ಹಾಲಿ ಸದಸ್ಯರಾಗಿರುವ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಮತ್ತೊಮ್ಮೆ ಟಿಕೆಟ್ ನೀಡುವುದಕ್ಕೆ ಸ್ಥಳೀಯ ಬಿಜೆಪಿ ಶಾಸಕರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಶಾಸಕ ಪ್ರಭು ಚವ್ಹಾಣ್ ಅವರಂತೂ ಬಹಿರಂಗವಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕಾಲಿಗೆ ಎರಗಿ ಮನವಿ ಮಾಡಿದ್ದರು. ಚವ್ಹಾಣ್ ಅವರ ಅಭಿಪ್ರಾಯಕ್ಕೆ ಹಲವು ಶಾಸಕರ ಸಹಮತ ವ್ಯಕ್ತಪಡಿಸಿದ್ದಾರೆ.
ಹೀಗಾಗಿ, ಈಗ ರಾಜ್ಯ ಬಿಜೆಪಿ ನಾಯಕರು ಖೂಬಾ ಅವರನ್ನು ಬದಲಿಸುವುದಾದರೆ ಪರ್ಯಾಯವಾಗಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಚಿಂತನೆ ನಡೆಸಿದ್ದಾರೆ. ಆಗ ಅವರಿಗೆ ಕಾಣಿಸಿದ್ದು ಕಾಂಗ್ರೆಸ್ಸಿನ ಲಕ್ಷ್ಮಣ ಸವದಿ.
ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಮರಾಠಾ ಭಾಷಿಕ ಮತದಾರರೂ ನಿರ್ಣಾಯಕರಾಗಿದ್ದಾರೆ. ಜತೆಗೆ ಲಿಂಗಾಯತ ಸಮುದಾಯವೂ ಪ್ರಮುಖ ಪಾತ್ರ ವಹಿಸಲಿದೆ. ಈ ಎರಡೂ ಅಂಶಗಳ ಮೇಲೆ ಲಕ್ಷ್ಮಣ ಸವದಿ ಅವರು ಸೂಕ್ತ ಅಭ್ಯರ್ಥಿಯಾಗಬಲ್ಲರು ಎಂಬ ಲೆಕ್ಕಾಚಾರ ಬಿಜೆಪಿ ಪಾಳೆಯದಲ್ಲಿ ನಡೆದಿದೆ ಎನ್ನಲಾಗಿದೆ.
ಬೀದರ್ನಲ್ಲಿ ಛಾಪು ಹೊಂದಿರುವ ಸವದಿ: ಹಿಂದೆ ಸವದಿ ಅವರು ಬಿಜೆಪಿಯಲ್ಲಿದ್ದಾಗ ನಡೆದ ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಆ ಕ್ಷೇತ್ರದಲ್ಲಿ ಬಿಜೆಪಿ ಗೆಲುವನ್ನೂ ಸಾಧಿಸಿತ್ತು. ಈ ಕಾರಣದಿಂದ ಸವದಿ ಅವರು ಬೀದರ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿದೆ.
ಈ ನಡುವೆ ಸವದಿ ಅವರೊಂದಿಗೆ ಕಳೆದ ವಾರ ನಡೆದ ಬೆಳಗಾವಿ ಬಿಜೆಪಿ ನಾಯಕರ ಮಾತುಕತೆ ವೇಳೆ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ಬಂದಾಗ ಬೆಳಗಾವಿ ಲೋಕಸಭಾ ಕ್ಷೇತ್ರದ ಬಗ್ಗೆ ಒಲವು ವ್ಯಕ್ತವಾಗಿತ್ತು. ಆದರೆ, ಅಲ್ಲಿಂದ ಟಿಕೆಟ್ ನೀಡುವುದಕ್ಕೆ ಪಕ್ಷದ ನಾಯಕರಾದ ಜಾರಕಿಹೊಳಿ ಸಹೋದರರು ಒಪ್ಪುವುದಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ತಿಳಿದು ಬಂದಿದೆ.