ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ಹೋಗುತ್ತಿದ್ದಂತೆ ಸಂಪುಟ ವಿಸ್ತರಣೆ ಚರ್ಚೆ ನಡೆದಿದೆ. ಅದರಲ್ಲೂ ಹಲವು ಹೊಸಬರಿಗೆ ಸಚಿವರಾಗುವ ಸೌಭಾಗ್ಯ ಸಿಗಬಹುದು ಎಂಬ ಮಾತು ಈಗ ಜೋರಾಗಿ ಕೇಳಿ ಬರುತ್ತಿದೆ.
ಮಾಜಿ ಉಪ ಮುಖ್ಯಮಂತ್ರಿ ಹಾಗೂ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರು ಮತ್ತೆ ಸಚಿವ ಸಂಪುಟ ಸೇರ್ಪಡೆಯಾಗುತ್ತಾರಾ ಎಂಬ ಕುತೂಹಲ ಇದೀಗ ಮೂಡಿದೆ. ಉಪಮುಖ್ಯಮಂತ್ರಿಯಾಗಿ ಅವರು ಬಿಜೆಪಿಯಲ್ಲಿದ್ದ ಅವಧಿಯಲ್ಲಿ ಹಲವು ಉಪಚುನಾವಣೆಯಲ್ಲಿ ಬಿಜೆಪಿಗೆ ಜಯ ತಂದು ಕೊಟ್ಟಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಸ್ಪರ್ಧೆಗೆ ಟಿಕೆಟ್ ನೀಡಿರಲಿಲ್ಲ. ಹೀಗಾಗಿ ಬಂಡೆದ್ದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೀಗ ಲಿಂಗಾಯತ ಮತಗಳ ಕ್ರೋಢೀಕರಣಕ್ಕೆ ಮುಂದಾಗಿರುವ ಕಾಂಗ್ರೆಸ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ತೀರ್ಮಾನಿಸಿದೆ ಎನ್ನಲಾಗಿದೆ. ಲಕ್ಷ್ಮಣ ಸವದಿ ಅವರ ಜೊತೆಗೆ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಶಿವಲಿಂಗೇಗೌಡ ಮತ್ತು ಎನ್. ವೈ. ಗೋಪಾಲಕೃಷ್ಣ ಅವರಿಗೂ
ಹೊಸ ಸಚಿವರಾಗುವ ಭಾಗ್ಯ ಲಭಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.