ನವದೆಹಲಿ : 18ನೇ ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬ ಬಲವಾದ ನಿರೀಕ್ಷೆಗಳ ಮಧ್ಯೆಯೇ ವಿರೋಧ ಪಕ್ಷದ ನಾಯಕನ ಜವಾಬ್ದಾರಿ ತೆಗೆದುಕೊಳ್ಳಲು ರಾಹುಲ್ ನಿರಾಕರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವ ಮೂರು ಹೆಸರುಗಳನ್ನು ಪರಿಗಣನೆಗೆ ತೆಗೆದುಕೊಂಡಿದೆ ಎನ್ನಲಾಗಿದೆ. ಕುಮಾರಿ ಸೆಲ್ಜಾ, ಗೌರವ ಗೊಗೊಯ್ ಮತ್ತು ಮನೀಶ ತಿವಾರಿ ಹೆಸರುಗಳು ಮುನ್ನೆಲೆಗೆ ಬಂದಿವೆ.

ಈ ಲೋಜಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ 232 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಕಾಂಗ್ರೆಸ್ 99 ಸ್ಥಾನ ಗೆದ್ದುಕೊಂಡಿದೆ. ಹೀಗಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನ ಕಾಂಗ್ರೆಸ್ ಗೆ ಸಿಗಲಿದೆ.
ರಾಹುಲ್‌ ಗಾಂಧಿ ಈ ಜವಾಬ್ದಾರಿ ವಹಿಸಿಕೊಂಡವರು ಮೈತ್ರಿಕೂಟದ ನಾಯಕರ ನಡುವೆ ಉತ್ತಮ ಸಮನ್ವಯ ಸಾಧಿಸಲಿದ್ದಾರೆ ಎಂಬುದು ಕಾಂಗ್ರೆಸ್ ಅಭಿಪ್ರಾಯ. ಆದರೆ ರಾಹುಲ್ ಅದಕ್ಕೆ ಸಿದ್ಧರಿಲ್ಲ ಎಂದು ಹೇಳಲಾಗುತ್ತಿದೆ. 2019 ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ರಾಹುಲ್ ಯಾವುದೇ ಹುದ್ದೆಯನ್ನು ವಹಿಸಿಕೊಳ್ಳಲು ಆಸಕ್ತಿ ಹೊಂದಿಲ್ಲ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ. ಹೀಗಾಗಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಮೂರು ಹೆಸರುಗಳು ಮುನ್ನೆಲೆಗೆ ಬಂದಿದೆ.