ನವದೆಹಲಿ : ಕೆಲಸಕ್ಕಾಗಿ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿದ್ದ ವೃದ್ಧ ದಂಪತಿಯನ್ನು ಬಹಳ ಹೊತ್ತಿನವರೆಗೆ ಕಾಯುವಂತೆ ಮಾಡಿದ್ದಕ್ಕಾಗಿ ನೋಯ್ಡಾ ಪ್ರಾಧಿಕಾರದ ಅಧಿಕಾರಿಗಳಿಗೆ ಸುಮಾರು 20 ನಿಮಿಷಗಳ ಕಾಲ ನಿಂತುಕೊಂಡೇ ಕೆಲಸ ಮಾಡುವ ಶಿಕ್ಷೆ ವಿಧಿಸಲಾಗಿತ್ತು ಎಂದು ವರದಿಯಾಗಿದೆ.

ಕಚೇರಿಗೆ ಬಂದ ವೃದ್ಧ ದಂಪತಿಯನ್ನು ನಿರ್ಲಕ್ಷಿಸಿ 50 ನಿಮಿಷಗಳ ಕಾಲ ಅನಗತ್ಯವಾಗಿ ಕಾಯುವಂತೆ ಮಾಡಿದ್ದನ್ನು ಗಮನಿಸಿದ ನೋಯ್ಡಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಲೋಕೇಶ ಎಂ. ಅವರು ಡಿಸೆಂಬರ್ 16 ರಂದು ವಸತಿ ಪ್ಲಾಟ್ ವಿಭಾಗದ ಸಿಬ್ಬಂದಿಗೆ ಶಿಕ್ಷೆ ವಿಧಿಸಿದರು. ಸಿಸಿಟಿವಿ ದೃಶ್ಯಾವಳಿಯಲ್ಲಿ ವೃದ್ಧ ದಂಪತಿ ಬಹಳ ಸಮಯದಿಂದ ನಿಂತಿರುವುದು ಕಂಡುಬಂದಿದೆ. ನಂತರ ಸಿಇಒ 15–20 ನಿಮಿಷದ ಬಳಿಕ ಮತ್ತೊಮ್ಮೆ ಸಿಸಿಟಿವಿ ಪರಿಶೀಲಿಸಿದಾಗಲೂ ವೃದ್ಧ ದಂಪತಿ ನಿಂತಿರುವುದು ಕಂಡು ಬಂದಿದ್ದರಿಂದ ಅಸಮಾಧಾನಗೊಂಡ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಸುಮಾರು 20 ನಿಮಿಷಗಳ ಕಾಲ ಕುರ್ಚಿ ಮೇಲೆ ಕುಳಿತುಕೊಳ್ಳದೆ ಕೆಲಸ ಮಾಡುವಂತೆ ವಸತಿ ಗೃಹ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

 

ನೋಯ್ಡಾ ಪ್ರಾಧಿಕಾರದ ಕಚೇರಿಯೊಳಗಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕರ್ತವ್ಯ ಮಾಡುವಾಗ ತೋರಿದ ನಿರ್ಲಕ್ಷ್ಯಕ್ಕಾಗಿ ಸಿಬ್ಬಂದಿಗೆ ಶಿಕ್ಷೆ ನೀಡಲಾಗಿದೆ. ಅಧಿಕಾರಿಗಳಿಗೆ ಶಿಕ್ಷೆ ನೀಡುವಾಗ ಸಿಇಒ ಅವರು, ‘ನಿಂತು ಕೆಲಸ ಮಾಡಿದಾಗ ಮಾತ್ರ ವೃದ್ಧರು ಪಡುತ್ತಿರುವ ಕಷ್ಟ ಅರ್ಥವಾಗುತ್ತದೆ’ ಎಂದು ಹೇಳಿದ್ದಾರೆ.
ನ್ಯೂ ಓಖ್ಲಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸುಮಾರು 65 ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದ್ದು, ಪ್ರತಿದಿನ ನೂರಾರು ನೋಯ್ಡಾ ನಿವಾಸಿಗಳು ವಿವಿಧ ಕೆಲಸಗಳಿಗಾಗಿ ಭೇಟಿ ನೀಡುತ್ತಾರೆ. ಕಳೆದ ವರ್ಷ ನೋಯ್ಡಾದ ಸಿಇಒ ಆಗಿ ಅಧಿಕಾರ ವಹಿಸಿಕೊಂಡ 2005-ಬ್ಯಾಚ್‌ನ ಐಎಎಸ್ ಅಧಿಕಾರಿ ಲೋಕೇಶ ಎಂ. ಅವರು ಈ ಕ್ಯಾಮೆರಾಗಳ ದೃಶ್ಯಗಳನ್ನು ಆಗಾಗ್ಗೆ ಪರಿಶೀಲಿಸುತ್ತಾರೆ. ಜನರನ್ನು ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರನ್ನು ದೀರ್ಘಕಾಲ ಕಾಯುವಂತೆ ಮಾಡಬೇಡಿ ಎಂದು ಸಿಬ್ಬಂದಿಗೆ ಸೂಚಿಸಿದ್ದಾರೆ.