ನವದೆಹಲಿ: ದೇಶದಲ್ಲಿ ವಕ್ಫ್ ಮಂಡಳಿಗಳ 58,929 ಆಸ್ತಿಗಳ ಅತಿಕ್ರಮವಾಗಿರುವ ಆರೋಪ ಕೇಳಿಬಂದಿದೆ. ಇದರಲ್ಲಿ ಕರ್ನಾಟಕದ 869 ಆಸ್ತಿಗಳು ಸೇರಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಲೋಕಸಭೆಯಲ್ಲಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ವಕ್ಫ್ ಕಾಯ್ದೆಯ ಸೆಕ್ಷನ್ 54 ಮತ್ತು 55ರ ಪ್ರಕಾರ, ರಾಜ್ಯ ವಕ್ಫ್ ಮಂಡಳಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ವಕ್ಫ್ ಆಸ್ತಿಗಳ ಅನಧಿಕೃತ ಒತ್ತುವರಿ ಮತ್ತು ಅತಿಕ್ರಮಣದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರವನ್ನು ಹೊಂದಿದ್ದಾರೆ ಎಂದು ರಿಜಿಜು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆಯ ಸೆಕ್ಷನ್ 56ರ ಅಡಿಯಲ್ಲಿ ವಕ್ಫ್ ಆಸ್ತಿಗಳ ಲೀಸ್ ರೂಲ್ಸ್ 2014 ಅನ್ನು ರೂಪಿಸಿದೆ. ಇದು ವಕ್ಫ್ ಆಸ್ತಿಗಳನ್ನು ಗುತ್ತಿಗೆಗೆ ನೀಡಲು ರಾಜ್ಯ ವಕ್ಫ್ ಮಂಡಳಿಗಳಿಗೆ ಅಧಿಕಾರ ನೀಡುತ್ತದೆ ಎಂದು ಹೇಳಿದ್ದಾರೆ.

ಕಾಲ ಕಾಲಕ್ಕೆ ವಕ್ಫ್ ಆಸ್ತಿಗೆ ಸಂಬಂಧಿಸಿ ಸಾಕಷ್ಟು ದೂರುಗಳು ಕೇಂದ್ರೀಯ
ವಕ್ಫ್ ಪರಿಷತ್‌ಗೆ ಬಂದಿವೆ. ಅವುಗಳನ್ನು ಆಯಾ ಸಂದರ್ಭದಲ್ಲೇ ರಾಜ್ಯ ವಕ್ಫ್ ಮಂಡಳಿ ಮತ್ತು ಸರ್ಕಾರಕ್ಕೆ ಕಳುಹಿಸಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದಿದ್ದಾರೆ

WAMSI(ಭಾರತದ ವಕ್ಫ್ ಆಸ್ತಿ ನಿರ್ವಹಣಾ ವ್ಯವಸ್ಥೆ)ಯಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, 58,929 ವಕ್ಫ್ ಆಸ್ತಿಗಳು ಅತಿಕ್ರಮಣವನ್ನು ಎದುರಿಸುತ್ತಿವೆ, ಈ ಪೈಕಿ ಕರ್ನಾಟಕದ 869 ಆಸ್ತಿಗಳು ಸೇರಿವೆ ಎಂದು ಹೇಳಿದರು.