ಬೆಂಗಳೂರು: ಇತ್ತೀಚೆಗೆ ರಾಜ್ಯ ಸರ್ಕಾರ, ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎಂ.ಕೆ. ಜಗದೀಶ್ ಅವರನ್ನು ದಿಢೀರನೆ ವರ್ಗಾವಣೆ ಮಾಡಿದೆ. ಅವರ ಜಾಗಕ್ಕೆ ಹಿರಿಯ ಕೆಎಎಸ್ ಅಧಿಕಾರಿ ಬಿ. ಶಿವಸ್ವಾಮಿಯವರನ್ನು ತಂದು ಕೂರಿಸಿದೆ.

ಈ ಬೆಳವಣಿಗೆಯನ್ನು ರಾಜ್ಯ ಬಿಜೆಪಿ ತೀವ್ರವಾಗಿ ಖಂಡಿಸಿದೆ.ಕಳೆದ ವರ್ಷ, ನಂದಿನಿಯನ್ನು ಗುಜರಾತ್ ನ ಅಮುಲ್ ಜೊತೆಗೆ ವಿಲೀನಗೊಳಿಸುವ ಹುನ್ನಾರ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಕಾಂಗ್ರೆಸ್, ಈಗ ತಾನು ಅಧಿಕಾರಕ್ಕೆ ಬಂದ ಕೂಡಲೇ ತಾನೇ ತನ್ನ ಕೈಯ್ಯಾರ ನಂದಿನಿ ಬ್ರ್ಯಾಂಡ್ ನ ಬೆಳವಣಿಗೆಯನ್ನು ಮಣ್ಣುಪಾಲು ಮಾಡಲು ಮುಂದಾಗಿದೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.

“ದಕ್ಷ ಅಧಿಕಾರಿಯ ಎತ್ತಂಗಡಿ ನ್ಯಾಯವೇ?”ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕಚೇರಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಡಿ. 5ರಂದು ಹಾಕಲಾಗಿರುವ ಟ್ವೀಟ್ ನಲ್ಲಿ, “ನಂದಿನಿ ಬ್ರಾಂಡ್ ಅನ್ನು ಇತ್ತೀಚಿನ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕರಾದ ಎಂ.ಕೆ. ಜಗದೀಶ್ ಅವರನ್ನು ಎತ್ತಂಗಡಿ ಮಾಡಿ ರಾಜ್ಯ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿದೆ.

ನಂದಿನಿ ಉತ್ಪನ್ನಗಳು ದೇಶಾದ್ಯಂತ ಖ್ಯಾತಿ ಗಳಿಸುವಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೂ ಅದರ ಕೀರ್ತಿ ಹಬ್ಬುವಲ್ಲಿ ಜಗದೀಶ್ ಅವರ ಪಾತ್ರ ದೊಡ್ಡದಿತ್ತು.
ಅವರ ದೂರದೃಷ್ಟಿತ್ವದ ಫಲವಾಗಿ ನಂದಿನಿ ಇಂದು ಜಗಜ್ಜಾಹೀರಾಗಿದೆ. ಆದರೆ, ಅಂಥ ದಕ್ಷ, ಒಬ್ಬ ದೂರದೃಷ್ಟಿತ್ವವುಳ್ಳ ಅಧಿಕಾರಿಯನ್ನು ಕೆಎಂಎಫ್ ನಿಂದ ತೆರವುಗೊಳಿಸಿರುವುದು ದುರದೃಷ್ಟಕರ ಎಂದು ಬಿವೈ ವಿಜಯೇಂದ್ರರವರ ಕಚೇರಿಯ ಟ್ವೀಟ್ ನಲ್ಲಿ ಉಲ್ಲೇಖಿಸಲಾಗಿದೆ.

“ಮಹತ್ವದ ಘಟ್ಟದಲ್ಲಿ ಟ್ರಾನ್ಸ್ ಫರ್ ಯಾಕೆ?”ನಂದಿನಿ ಬ್ರ್ಯಾಂಡ್ ನಡಿ ಹಲವಾರು ತಿನಿಸುಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಗಿತ್ತು. ಸದ್ಯದಲ್ಲೇ ಒಡೆದ ಹಾಲಿನಿಂದ ತಯಾರಿಸಲ್ಪಡುವ ಇಡ್ಲಿ ಹಾಗೂ ದೋಸೆ ಬ್ಯಾಟರ್ ಗಳನ್ನು ಬಿಡುಗಡೆ ಮಾಡಲು ಜಗದೀಶ್ ಅವರು ಯೋಜಿಸಿದ್ದರು. ಈಗಾಗಲೇ ಹಾಲು – ಹಾಲಿನ ಉತ್ಪನ್ನಗಳ ಮಾರುಕಟ್ಟೆಯಲ್ಲಿ ತನ್ನದೇ ಪಾರುಪತ್ಯ ಸ್ಥಾಪಿಸಿರುವ ನಂದಿನಿ ಬ್ರಾಂಡ್ ಅಡಿಯಲ್ಲಿ ಸದ್ಯದಲ್ಲೇ ದೋಸೆ – ಇಡ್ಲಿಗಾಗಿನ ರುಬ್ಬಿದ ಹಿಟ್ಟು ಮಾರುಕಟ್ಟೆಗೆ ಬಂದಿದ್ದರೆ ಬಲುಬೇಗನೇ ಅದು ಜನಪ್ರಿಯಗೊಳ್ಳುವ ಸಾಧ್ಯತೆಗಳಿದ್ದವು.
ಆದರೆ, ಅಷ್ಟರಲ್ಲಿ ಜಗದೀಶ್ ಅವರನ್ನು ಕೆಎಂಎಫ್ ಎಂಡಿ ಸ್ಥಾನದಿಂದ ಎತ್ತಂಗಡಿ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಕೇರಳದ ಬ್ರ್ಯಾಂಡ್ ಗಳ ಸಂರಕ್ಷಣೆ ಕಾರಣವೇ?ದೋಸೆ ಹಾಗೂ ಇಡ್ಲಿ ಬ್ಯಾಟರ್ ವಿಚಾರದಲ್ಲಿ ಕರ್ನಾಟಕದ ಮಾರುಕಟ್ಟೆಯನ್ನು ಖಾಸಗಿ ಬ್ರ್ಯಾಂಡ್ ಗಳೇ ಆಕ್ರಮಿಸಿವೆ. ಆ ಬ್ರ್ಯಾಂಡ್ ಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಜಂಟಿಯಾಗಿ ನಂದಿನಿ ಬ್ರ್ಯಾಂಡ್ ದೋಸೆ – ಇಡ್ಲಿ ಬ್ಯಾಟರ್ ಗೆ ಗುನ್ನಾ ಇಟ್ಟಿದ್ದಾರೆ. ಇದರ ಹಿಂದೆ ಯಾರ ಕರಾಮತ್ತಿದೆ, ಯಾವ ಲಾಬಿಯಿದೆ? ಕರ್ನಾಟಕದ ಜನರು ನಿಮ್ಮಿಂದ (ಸಿಎಂ, ಡಿಸಿಎಂ ಕಡೆಯಿಂದ) ಉತ್ತರ ನಿರೀಕ್ಷಿಸುತ್ತಿದ್ದಾರೆ.