ಬೆಳಗಾವಿ: ಮೂಡಲಗಿ ತಾಲೂಕು ಕಲ್ಲೋಳಿ ಗ್ರಾಮದಲ್ಲಿ ತಮ್ಮನನ್ನು ಸ್ವತಃ ಅಣ್ಣನೆ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ವಿಠಲ್ ಚವಾಣ ಕೊಲೆಯಾದವ. ಭೀಮಪ್ಪ ಚವಾಣ ಕೊಲೆ ಮಾಡಿರುವ ಆರೋಪಿ. ಅಣ್ಣ ಭೀಮಪ್ಪನ ಮಗಳು ಪಕ್ಕದ ಊರಿನ ಯುವಕನನ್ನು ಪ್ರೀತಿಸಿದ್ದಳು. ಸರಕಾರಿ ನೌಕರಿಯಲ್ಲಿದ್ದಾನೆ ಎಂದು ನಂಬಿಸಲಾಗಿತ್ತು. ಆದರೆ ಮದುವೆಯಾದ ಮೂರು ತಿಂಗಳ ನಂತರ ಪತಿ ಸರಕಾರಿ ನೌಕರಿಯಲ್ಲಿ ಇಲ್ಲ, ಸುಳ್ಳು ಹೇಳಿ ಮದುವೆ ಆಗಿರುವುದು ಗೊತ್ತಾಗಿದೆ. ಇದರಿಂದ ನೊಂದು ಆಕೆ ಪತಿಯ ಮನೆ ಬಿಟ್ಟು ತವರಿಗೆ ಬಂದಿದ್ದಳು. ಆದರೆ, ತವರಿಗೆ ಬಂದಿದ್ದ ಮಗಳ ಬಗ್ಗೆ ಆಕೆಯ ಚಿಕ್ಕಪ್ಪ ವಿಠಲ್ ಊರಲ್ಲಿ ಅವಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ. ತನ್ನ ಅಣ್ಣನ ಮಗಳು ಗರ್ಭಿಣಿಯಾಗಿ ಬಂದಿದ್ದಾಳೆ ಎಂದು ಅಪಪ್ರಚಾರ ಮಾಡಲು ಆರಂಭಿಸಿದ್ದ. ಭೀಮಪ್ಪ ಸಹೋದರನ ಜೊತೆ ಜಗಳವಾಡಿ ಎಚ್ಚರಿಕೆಯನ್ನು ನೀಡಿದ್ದ. ಆದರೂ ತಮ್ಮ ವಿಠಲ್ ಅಪಪ್ರಚಾರ ನಿಲ್ಲಿಸಿರಲಿಲ್ಲ. ಕೆಲದಿನಗಳ ಹಿಂದೆ ಭೀಮಪ್ಪ ಗ್ಯಾಂಗ್ ಕಟ್ಟಿಕೊಂಡು ಬಂದು ವಿಠಲ್ ನನ್ನು ರಾಡಿನಿಂದ ಹೊಡೆದಿದ್ದಾನೆ. ತೀವ್ರ ಹಲ್ಲೆಗೊಳಗಾಗಿದ್ದ ವಿಠಲ್ ನನ್ನು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭೀಮಪ್ಪ ಮತ್ತು ಲಕ್ಷ್ಮಣ ಪಡತಾರೆ ವಿರುದ್ಧ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ಅವರನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ.