ಕಾರ್ಕಳ : ಕಾರ್ಕಳ ತಾಲೂಕು ಅಜೆಕಾರಿನ ಮರ್ಣೆಯಲ್ಲಿ ಪ್ರಿಯಕರನ ಜೊತೆ ಸೇರಿ ಪತ್ನಿಯೊಬ್ಬಳು ಪತಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.

ಪತ್ನಿ ಪ್ರತಿಮಾ ತನ್ನ 44 ವರ್ಷದ ಪತಿ ಬಾಲಕೃಷ್ಣ ಅವರಿಗೆ ಊಟದಲ್ಲಿ ವಿಷ ಬೆರೆಸಿ ಬಳಿಕ ಬೆಡ್ ಶೀಟ್ ನಿಂದ ಉಸಿರುಗಟ್ಡಿಸಿ ಕೊಲೆ ಮಾಡಿದ್ದಾಳೆ. ಈ ಸಂಬಂಧ ಪ್ರತಿಮಾ ಮತ್ತು ಪ್ರಿಯಕರ ದಿಲೀಪ್ ಹೆಗ್ಡೆಯನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಸುಮಾರು 25 ದಿನಗಳಿಂದ ಬಾಲಕೃಷ್ಣ ಅನಾರೋಗ್ಯದಿಂದ ಬಳಲುತ್ತಿದ್ದರು. ಮಂಗಳೂರು ವೆನ್ಲಾಕ್, ಬೆಂಗಳೂರು ನಿಮಾನ್ಸ್ ,ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡಲಾಗಿತ್ತು. ಆದರೆ, ಅಕ್ಟೋಬರ್ 20ರಂದು ಬಾಲಕೃಷ್ಣ ಮನೆಯಲ್ಲಿ ಮೃತಪಟ್ಟಿದ್ದರು. ಅವರ ಸಾವಿನ ಬಗ್ಗೆ ಅನುಮಾನ ಬಂದು ಆಕೆಯ ಸಹೋದರ ಪೊಲೀಸರಿಗೆ ದೂರು ನೀಡಿದ ಬಳಿಕ ಇಡೀ ಪ್ರಕರಣ ಬೆಳಕಿಗೆ ಬಂದಿದೆ.

ಅಜೆಕಾರು ಪೊಲೀಸರು ಪ್ರತಿಮಾ ಹಾಗೂ ಪ್ರಿಯಕರ ದಿಲೀಪ್ ನನ್ನು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಕೊಲೆ ರಹಸ್ಯ ಬಾಯಿಬಿಟ್ಟಿದ್ದಾರೆ. ಪ್ರತಿಮಾಗೆ ರೀಲ್ಸ್ ಹುಚ್ಚು ಇತ್ತು. ಬಲವಂತವಾಗಿ ಪತಿ ಬಾಲಕೃಷ್ಣ ಜೊತೆ ಸೇರಿ ಮಾಡಿದ್ದಳು. ಹಲವಾರು ರೀಲ್ಸ್ ಮಾಡಿದ್ದಳು. ಈ ರೀಲ್ಸ್ ಗಳನ್ನು ಪೋಸ್ಟ್ ಸಹ ಮಾಡಿದ್ದಳು. ಇದರ ಮೂಲಕವೇ instagram ನಲ್ಲಿ ದಿಲೀಪ್ ಮತ್ತು ಪ್ರತಿಮಾ ನಡುವೆ ಪ್ರೀತಿ ಅಂಕುರಿಸಿತ್ತು . ಮದುವೆಯಾದರೂ ಪ್ರತಿಮಾ ದಿಲೀಪ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು.

ನಮ್ಮಿಬ್ಬರ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಾರೆ ಎಂದು ಗ್ರಹಿಸಿದ್ದ ಇಬ್ಬರು ಸೇರಿ ಬಾಲಕೃಷ್ಣರನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ಬಾಲಕೃಷ್ಣ ಅವರಿಗೆ ತನ್ನ ಪತ್ನಿ ಪ್ರತಿಮಾ ಅವರ ಬಗ್ಗೆ ಯಾವ ಅನುಮಾನವೂ ಇರಲಿಲ್ಲ. ಪತ್ನಿ ಐಷಾರಾಮಿಯಾಗಿ ಜೀವನ ನಡೆಸಿ ಮಾರ್ಡನ್ ಹೆಣ್ಣು ಮಕ್ಕಳಂತೆ ಫ್ಯಾಷನ್ ಮಾಡಲು ಸಹ ಅವಕಾಶ ನೀಡಿದ್ದರು. ಆದರೆ ಈಗ ಪತ್ನಿ ಕೊಲೆ ಮಾಡಿರುವ ಬಗ್ಗೆ ನೆರೆಹೊರೆಯವರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಭಾ ಮಾರ್ಡನ್ ಡ್ರೆಸ್ ಹಾಕಿಕೊಂಡು ಹುಡುಗಿಯಂತೆ ತನ್ನ ಸೌಂದರ್ಯ ತೋರಿಸಲು ಜನಪ್ರಿಯ ಸಾಮಾಜಿಕ ಜಾಲತಾಣವಾದ instagram ನಲ್ಲಿ ವಿಡಿಯೋ ಹಾಗೂ ಫೋಟೋ ಹಂಚಿಕೊಳ್ಳುತ್ತಿದ್ದಳು. ಸ್ವತಃ ಪತಿಯ ಮುಂದೆ ಬಂದು ಕರಿಮಣಿ ಮಾಲೀಕ ನೀನಲ್ಲ.. ಎಂದು ರೀಲ್ಸ್ ಸಹ ಮಾಡಿದ್ದಳು. ಆದರೆ ಆತ ಹೆಂಡತಿಯ ಖುಷಿಯೇ ತನ್ನ ಖುಷಿಯೆಂದು ಮೌನವಾಗಿದ್ದ.

 


ಈ ನಡುವೆ ಇದ್ದಕ್ಕಿದ್ದಂತೆ ಬಾಲಕೃಷ್ಣ ಅವರಿಗೆ ಅನಾರೋಗ್ಯ ಆರಂಭವಾಗಿದೆ. 25 ದಿನಗಳಿಂದ ವಾಂತಿ ಬೇಧಿ ಶುರುವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಗಂಡನಿಗೆ ಕಾಮಾಲೆ ರೋಗ ಎಂದು ಆಕೆ ಬಿಂಬಿಸಿ ಕಾರ್ಕಳದ ಆಸ್ಪತ್ರೆಗೆ ದಾಖಲಿಸಿದ್ದಾಳೆ. ನಂತರ ಮಣಿಪಾಲ ಕೆಎಂಸಿ, ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ, ನಿಮ್ಹಾನ್ಸ್, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ ಚೇತರಿಕೆ ಕಾಣಲೇ ಇಲ್ಲ. ಗುಣಮುಖರಾಗದ ಹಿನ್ನೆಲೆಯಲ್ಲಿ ಬಾಲಕೃಷ್ಣ ಅಕ್ಟೋಬರ್ 20 ರಂದು ಮೃತ ಪಟ್ಟಿದ್ದಾರೆ. ಆಗ ಅವರ ಸಹೋದರ ರಾಮಕೃಷ್ಣ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರತಿಮಾ ಮೇಲೆ ದೂರು ದಾಖಲು ಆಗುತ್ತಿದ್ದಂತೆ ಆಕೆಯ ಸಹೋದರ ಸಂದೀಪನಿಗೂ ಭಾವನ ಸಾವಿನ ಬಗ್ಗೆ ಸಂದೇಹ ಬಂದಿದೆ. ತನ್ನ ಸಹೋದರಿಗೆ ಅನೈತಿಕ ಸಂಬಂಧ ಇದೆಯೇ ಎಂಬ ಬಗ್ಗೆ ಪತ್ತೆ ಮಾಡಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಆಗ ತನ್ನ ಸಹೋದರನ ಬಳಿ ತನ್ನ ಪತಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ನನಗೆ ದಿಲೀಪ್ ಹೆಗ್ಡೆಯನ್ನು ಬಿಟ್ಟು ಇರಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಪತಿಯನ್ನು ದೂರ ಮಾಡಲು ಸಹ ಕಾರಣ ಇರಲಿಲ್ಲ. ಹೀಗಾಗಿ ಬಾಲಕೃಷ್ಣ ಅನಾರೋಗ್ಯದಿಂದ ಬಳಲುತ್ತಿದ್ದಾಗ ಪ್ರಿಯಕರನೊಂದಿಗೆ ಸೇರಿಕೊಂಡು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.