
ಇಸ್ಲಾಂ ಎಂಬ ಪದದ ಅರ್ಥ ಅರಬ್ಬಿ ಭಾಷೆಯಲ್ಲಿ ಅನುಸರಣೆ ಮತ್ತು ವಿಧೇಯತೆಯಾಗಿದೆ. ಇಸ್ಲಾಂ ಧರ್ಮವು ಸೃಷ್ಟಿಕರ್ತನ ಅನುಸರಣೆ ಮತ್ತು ವಿಧೇಯತೆ ಯಾಗಿರುವುದರಿಂದ ಅದನ್ನು ಇಸ್ಲಾಂ ಎಂದು ಹೆಸರಿಸಲಾಗಿದೆ. ಲೋಕದಲ್ಲಿರುವ ಪ್ರತಿಯೊಂದು ವಸ್ತು ಒಂದು ನಿಯಮ ಮತ್ತು ಕಾನೂನಿಗೆ ಅಧೀನವಾಗಿರುವುದನ್ನು ನಾವು ಕಾಣುತ್ತೇವೆ. ಸೂರ್ಯ ಚಂದ್ರರು ಒಂದು ಬಲಿಷ್ಠ ನಿಯಮದಲ್ಲಿ ಬಂಧಿತರಾಗಿದ್ದು ಅದರ ವಿರುದ್ಧ ಅವು ಕೂದಲೇಳೆಯಷ್ಟು ಕೂಡ ಚಲಿಸಲಾರವು. ಭೂಮಿಯು ತನ್ನ ವಿಶಿಷ್ಟ ವೇಗದಲ್ಲಿ ಸುತ್ತುತ್ತಿರುತ್ತದೆ. ಇದನ್ನು ನಾವು ತಿಳಿದಿರುವೆವು. ಅದಕ್ಕೆ ನಿಗದಿಪಡಿಸಲಾಗಿರುವ ಸಮಯ ವೇಗ ಮತ್ತು ಮಾರ್ಗದಲ್ಲಿ ನೀರು ಗಾಳಿ ಬೆಳಕು ಶಾಖಗಳೆಲ್ಲವೂ ಒಂದು ನಿಯಮಕ್ಕೆ ಬದ್ಧವಾಗಿವೆ. ಜಡ ವಸ್ತುಗಳು ಮತ್ತು ಪ್ರಾಣಿಗಳ ಪೈಕಿ ಪ್ರತಿಯೊಂದಕ್ಕೂ ಒಂದು ನಿಶ್ಚಿತ ನಿಯಮವಿದೆ. ಅದರಂತೆ ಅದು ಹುಟ್ಟುತ್ತದೆ, ಬೆಳೆಯುತ್ತದೆ ಮತ್ತು ಸಾಯುತ್ತದೆ. ಸ್ವಯಂ ಮನುಷ್ಯನ ಬಗ್ಗೆ ಯೋಚಿಸಿದರೂ ಅವನು ನಿಸರ್ಗ ನಿಯಮಕ್ಕೆ ಅಧೀನನಾಗಿದ್ದಾನೆ ಎಂಬುದು ತಿಳಿಯುತ್ತದೆ. ಅವನು ಸೃಷ್ಟಿಗೆ ನಿಶ್ಚಯಿಸಲಾಗಿರುವ ನಿಯಮದಂತೆಯೇ ಅವನು ಜನಿಸುತ್ತಾನೆ. ನೀರು ಆಹಾರ ಶಾಖ ಬೆಳಕನ್ನು ಹೊಂದುತ್ತಾನೆ. ಅವನ ಹೃದಯದ ಚಲನೆ ಅವನ ರಕ್ತದ ಸಂಚಾರ ಅವನ ಉಸಿರಾಟ ಕ್ರಿಯೆಗಳೆಲ್ಲವೂ ಆ ನಿಯಮಕ್ಕೆ ಬದ್ಧವಾಗಿವೆ. ಅವನ ಮೆದುಳು ಜಠರ, ಸ್ವಾಶಕೋಶ, ಸ್ನಾಯುಗಳು, ಅಂಗಾಂಗಗಳು ಅವನ ಕೈ ಕಾಲು ನಾಲಿಗೆ ಕಿವಿ, ಕಣ್ಣು, ಮತ್ತು ಮೂಗು ಇತ್ಯಾದಿ. ಅವನ ಶರೀರದ ಒಂದೊಂದು ಅಂಗವು ಅದಕ್ಕೆ ನಿಶ್ಚಯಿಸಿದ ಕೆಲಸವನ್ನು ನಿರ್ವಹಿಸುತ್ತದೆ. ದೊಡ್ಡ ದೊಡ್ಡ ಗ್ರಹಗಳಿಂದ ಹಿಡಿದು ಭೂಮಿಯ ಅತ್ಯಂತ ಸಣ್ಣ ಕಣದ ವರೆಗೆ ಎಲ್ಲ ವಸ್ತುಗಳು ಬಂದಿತವಾಗಿರುವಂತಹ ಈ ಬಲಿಷ್ಠ ನಿಯಮವು ಒಂದು ದೊಡ್ಡ ಅಧಿಪತಿಯಿಂದ ರಚಿತವಾದ ನಿಯಮವಾಗಿದೆ. ಸಂಪೂರ್ಣ ವಿಶ್ವ ಮತ್ತು ವಿಶ್ವದ ಪ್ರತಿಯೊಂದು ವಸ್ತು ಆ ಅಧಿಪತಿಯ ವಿಧೇಯ ಆಜ್ಞಾನು ವರ್ತಿಯಾಗಿದೆ. ಏಕೆಂದರೆ ಅದು ಆ ಅಧಿಪತಿಯಿಂದ ರಚಿತವಾದ ನಿಯಮವನ್ನೇ ಪಾಲಿಸುತ್ತದೆ. ಆದ್ದರಿಂದ ಆ ಸೃಷ್ಟಿಕರ್ತನ ವಿಧೇಯತೆ ಮತ್ತು ಅನುಸರಣೆಯನ್ನೇ ನಾವು ಇಸ್ಲಾಂ ಎನ್ನುತ್ತೇವೆ. ರಂಜಾನ್ ಅಥವಾ ಈದ್ ಉಲ್ ಫಿತರ್ ಇಸ್ಲಾಂ ಧರ್ಮಿಯರ ಪ್ರಮುಖ ಹಬ್ಬಗಳಲ್ಲಿ ಒಂದು. ರಂಜಾನ್ ಎಂಬುದು ಒಂದು ತಿಂಗಳು. ಇದು ಇಸ್ಲಾಂ ಕ್ಯಾಲೆಂಡರ್ ನ ಪ್ರಕಾರ ವರ್ಷದ 9ನೇ ತಿಂಗಳು. ರಂಜಾನ್ ಸಮಯದಲ್ಲಿ ಉಪವಾಸಕ್ಕೆ ಬಹಳ ಮಹತ್ವವಿದೆ. ಧಾರ್ಮಿಕ ಸ್ವಭಾವದವರು ಈ ತಿಂಗಳು ಉಪವಾಸ ಆಚರಿಸುತ್ತಾರೆ ಎನ್ನಲಾಗಿದೆ. ಉಪವಾಸ ಅಲ್ಲಾಹನ ಸಂಪ್ರೀತಿಗಾಗಿ ದೇಹದ ಇಚ್ಛೆಗಳನ್ನು ನಿಗ್ರಹಿಸುವ ಶಕ್ತಿಯಾಗಿದೆ. ಇದಲ್ಲದೆ ಸತ್ಯ ವಿಶ್ವಾಸ, ದೇವ, ಭಯ, ದೇವಾಜ್ಞೆಗಳ ಅನುಸರಣೆ ನೈತಿಕ ಪರಿಶುದ್ಧತೆ ಹಾಗೂ ಸತ್ಕರ್ಮಗಳ ಅರಿವು ಮೂಡಿಸುವ ಏಕೈಕ ವೃತವಾಗಿದೆ. ಇಸ್ಲಾಂ ಧರ್ಮದ ಪ್ರವಾದಿ ಮೊಹಮ್ಮದ್ ಸಲ್ಲಲ್ಲಾಹು ಅಲೈ ಹಿ ವ ಸಲ್ಲಂ ಅವರ ಮೇಲೆ ಪವಿತ್ರ ಕುರಾನ್ ಅವತೀರ್ಣಗೊಂಡ ಮಾಸವೇ ರಮ್ಜಾನ್ ಆಗಿದೆ. ಮಾನವ ಕಲ್ಯಾಣಕ್ಕಾಗಿ ಇದೆ ತಿಂಗಳಲ್ಲಿ ಪವಿತ್ರ ಕುರಾನ್ ಪ್ರವಾದಿಗಳ ಮೇಲೆ ಅವತೀರ್ಣಗೊಂಡಿದ್ದರಿಂದ ಇದನ್ನು ಗೌರವಿಸಲು ಪ್ರತಿ ವರ್ಷವೂ ಈ ಒಂದು ತಿಂಗಳು ವೃತಾಚರಣೆ ಕಡ್ಡಾಯಗೊಳಿಸಲಾಗಿದೆ. ಒಂದು ತಿಂಗಳ ಕಠಿಣ ವೃತದ ಬಳಿಕ ಈದ್ ಉಲ್ ಫಿತರ್ ಆಗಮಿಸುತ್ತದೆ. ರಂಜಾನ್ ತಿಂಗಳ ಹಗಲಿನಲ್ಲಿ ಹನಿ ನೀರೂ ಕುಡಿಯದೆ ಕಠಿಣ ವೃತದ ಮೂಲಕ ಹಸಿವಿನ ಕಠಿಣತೆಯನ್ನು ಅರಿಯುತ್ತಾರೆ. ಬಡವ ಶ್ರೀಮಂತರೆನ್ನುವ ಭೇದವಿಲ್ಲದೆ ಎಲ್ಲರೂ ವೃತಾಚರಣೆ ಮಾಡಿ ಸಮಾನತೆ ಅರಿಯುತ್ತಾರೆ. ಅಲ್ಲಾಹನನ್ನು ಪ್ರಾರ್ಥಿಸುತ್ತ ಎಲ್ಲ ರೀತಿಯ ತಪ್ಪುಗಳಿಂದ ದೂರವಿರುತ್ತಾರೆ. ರಂಜಾನ್ ಉಪವಾಸ ಎಲ್ಲಾ ವಯಸ್ಕ ರರಿಗೆ ಮತ್ತು ಆರೋಗ್ಯವಂತರಿಗೆ ಕಡ್ಡಾಯವಾಗಿದೆ. ಆದರೆ ದೈಹಿಕವಾಗಿ ಸಬಲರಲ್ಲದವರಿಗೆ ಇದರಿಂದ ವಿನಾಯತಿ ನೀಡಲಾಗಿದೆ. ರಂಜಾನ್ ಹಬ್ಬವು ಮುಸ್ಲಿಮರು ವಿಶೇಷವಾಗಿ ದಾನ ಶೀಲರಾಗಲು ಒಂದು ಒಳ್ಳೆಯ ಸಮಯವಾಗಿರುವುದರಿಂದ ಮತ್ತು ಉಪವಾಸ ಮುಸ್ಲಿಮರಿಗೆ ಹಸಿದ ಮತ್ತು ನಿರ್ಗತಿಕರ ಬಗ್ಗೆ ಸಹಾನುಭೂತಿ ಹೊಂದಲು ಸಹಾಯ ಮಾಡುತ್ತದೆ. ಆದ್ದರಿಂದ ಅನೇಕ ಮಸೀದಿಗಳು ರಂಜಾನ್ ಸಮಯದಲ್ಲಿ ಆಹಾರ ಸಂಗ್ರಹ ಅಥವಾ ದಾನಕ್ಕಾಗಿ ನಿಧಿ ಸಂಗ್ರಹಣೆಗಳನ್ನು ನಡೆಸುತ್ತವೆ. ಅನೇಕ ಮಸೀದಿಗಳು ತಮ್ಮ ಸ್ನೇಹಿತರು ಮತ್ತು ಇತರ ಧರ್ಮಗಳ ನೆರೆಹೊರೆಯವರು ಉಪವಾಸ ದಿನದ ಕೊನೆಯಲ್ಲಿ ತಮ್ಮ ಉಪವಾಸ ಭೋಜನ ಅಥವಾ ಇಪ್ತಾರ್ ಗೆ ಸೇರಲು ಮುಕ್ತ ಮನೆಗಳನ್ನು ಸಹ ಆಯೋಜಿಸುತ್ತವೆ. ಪ್ರಾರ್ಥನೆ ಕುರಾನ್ – ಪಠಣ ಮತ್ತು ದೇವ ಸ್ಮರಣೆ ಯಲ್ಲಿ ಜಾಗರಣೆ ಮಾಡುವುದರಿಂದ ಮಸೀದಿಗಳು ರಾತ್ರಿ ಇಡಿ ತೆರೆದಿರುತ್ತವೆ. ರಂಜಾನ್ ಮುಸ್ಲಿಮರ ಜೀವನದಲ್ಲಿ ಅತ್ಯಂತ ಮಹತ್ವದ ಭಾಗವಾಗಿದೆ. ಇದು ಕೇವಲ ಉಪವಾಸ ಮಾತ್ರವಲ್ಲ, ನೈತಿಕ ಸುದ್ದಿಕರಣ, ಮಾನವೀಯತೆ ಮತ್ತು ನೈಜ -ಪ್ರೀತಿ ಮೆರೆಸುವ ಸಮಯ. ಇದು ಆಧ್ಯಾತ್ಮಿಕ ಮತ್ತು ಮಾನಸಿಕ ಉನ್ನತಿಗಾಗಿ ಅನುಸರಿಸಲಾಗುವ ಅತ್ಯಂತ ಶ್ರೇಷ್ಠ ಜೀವನ ಶೈಲಿಯಾಗಿದೆ. ರಂಜಾನದ ಉದ್ದೇಶ ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸುವುದು ಮತ್ತು ಸಾಮಾಜಿಕ ಒಗ್ಗಟ್ಟನ್ನು ಬೆಳೆಸುವುದು ರಂಜಾನ್ ನಮಗೆ ಶಿಸ್ತು ಸಹಾನುಭೂತಿ ಮತ್ತು ಸೃಷ್ಟಿಕರ್ತನ ಹತ್ತಿರ ಹೋದಂತೆ ಒಂದು ಪಾಠ ಕಲಿಸುತ್ತದೆ ಮತ್ತು ಈ ವಿಶಿಷ್ಟ ಹಬ್ಬವನ್ನು ಎಲ್ಲರೂ ಸೇರಿ ಮನೋಭಾವದಿಂದ ಆಚರಿಸೋಣ.
* ಎನ್ ಎಫ್ ಕಿತ್ತೂರು ಶಿಕ್ಷಕರು ಬೆಳಗಾವಿ