ಬೆಂಗಳೂರು :“ನನ್ನ ರಾಜಕೀಯ ಅಂತ್ಯ ತೀರ್ಮಾನ ಮಾಡೋರು ಜನರು. ಬೇರೆ ಯಾರೂ ಅಲ್ಲ. ಜನರೇ ನನ್ನ ಹಿಂದಿರುವ ಶಕ್ತಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ವಿಧಾನಸೌಧದ ಆವರಣದಲ್ಲಿ ಶುಕ್ರವಾರ ನಡೆದ ಅಂತರಾಷ್ಟ್ರೀಯ ಯೋಗದಿನ ಕಾರ್ಯಕ್ರಮದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
ಚನ್ನಪಟ್ಟಣದಿಂದ ಸ್ಪರ್ಧೆ ಮಾಡಿದರೆ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯ ಅಂತ್ಯವಾಗಲಿದೆ ಎಂಬ ಸಿ.ಪಿ.ಯೋಗೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ರಾಜಕೀಯ ಅಂತ್ಯ ತೀರ್ಮಾನ ಮಾಡುವವರು ಜನರು. ಯೋಗೇಶ್ವರ್ ದೊಡ್ಡವರು. ಅವರ ಮಾತಿಗೆ ಪ್ರತಿಕ್ರಿಯೆ ನೀಡುವಷ್ಟು ಸಮಯ ನನ್ನ ಬಳಿ ಇಲ್ಲ. ನಾನೂ ರಾಮನಗರ ಜಿಲ್ಲೆಯವನು. “ನಿಮ್ಮ ಋಣ ತೀರಿಸಲು ಬದ್ಧನಿದ್ದೇನೆ, ಶಕ್ತಿ ಕೊಡಿ ಎಂದು ಆ ಕ್ಷೇತ್ರದ ಜನರ ಬಳಿ ಕೇಳಿಕೊಂಡಿದ್ದೇನೆ. ನನ್ನ ಮೇಲೆ ವಿಶ್ವಾಸವಿದ್ದರೆ ಬೆಂಬಲ ನೀಡುತ್ತಾರೆ” ಎಂದು ತಿಳಿಸಿದರು.
ಸ್ವಪ್ರತಿಷ್ಠೆಗಾಗಿ ದೇಶದ ಸಂಪತ್ತು ಹಾಳು ಮಾಡುತ್ತಿದ್ದಾರೆ ಎಂಬ ಸುರೇಶ್ ಕುಮಾರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಚನ್ನಪಟ್ಟಣದಲ್ಲಿ ಉಪಚುನಾವಣೆ ನಡೆದರೆ ಕನಕಪುರದಲ್ಲಿ ಯಾಕೆ ಉಪಚುನಾವಣೆ ನಡೆಯುತ್ತದೆ. ನಾನು ಕನಕಪುರದ ಶಾಸಕ. ಪಕ್ಷದ ಅಧ್ಯಕ್ಷನಾಗಿ ನನ್ನ ಮೇಲೆ ಜವಾಬ್ದಾರಿ ಇದೆ. ಇದೂ ನನ್ನದೇ ಕ್ಷೇತ್ರ, ನನ್ನದೇ ನಾಯಕತ್ವ. ಸಿದ್ದರಾಮಯ್ಯ ಹಾಗೂ ನಾನು ಸೇರಿ ಚುನಾವಣೆ ನಡೆಸುತ್ತೇವೆ” ಎಂದರು.
*ಯೋಗ ನಮ್ಮ ದೇಶದ ಆಸ್ತಿ:*
ಯೋಗಕ್ಕೆ ಐದು ಸಾವಿರ ವರ್ಷಗಳ ಇತಿಹಾಸವಿದ್ದು, ದೇಶ ಮಾತ್ರವಲ್ಲದೇ ಇಡೀ ವಿಶ್ವ ನಮ್ಮ ಧರ್ಮ, ಸಂಸ್ಕೃತಿ, ಪದ್ಧತಿಯಾಗಿರುವ ಯೋಗವನ್ನು ಒಪ್ಪಿದೆ. ಅನೇಕ ಹಿರಿಯರು, ಋಷಿಗಳು ಇದಕ್ಕೆ ಕೊಡುಗೆ ನೀಡಿದ್ದು, ಯೋಗಕ್ಕೆ ಯಾವುದೇ ಜಾತಿ, ಕುಲ, ಧರ್ಮದ ಎಲ್ಲೆ ಇಲ್ಲ. ನನಗೆ ಯೋಗಾಭ್ಯಾಸವಿಲ್ಲ. ಶಾಲಾ ದಿನಗಳಲ್ಲಿ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸುತ್ತಿದ್ದೆ. ನನ್ನ ಮನೆಯಲ್ಲಿ ಯೋಗಭ್ಯಾಸ ಮಾಡುತ್ತಾರೆ. ಯೋಗ ಈ ದೇಶದ ಆಸ್ತಿ. ಯೋಗಕ್ಕೆ ಪ್ರೋತ್ಸಾಹ ಹಾಗೂ ಪ್ರಚಾರ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಹತ್ತು ದಿನಗಳ ಕಾಲ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ನೀವು ಆರೋಗ್ಯವಂತರಾಗಿರಬೇಕು, ಮಾನಸಿಕವಾಗಿ ಶಕ್ತಿಶಾಲಿಯಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ಕಾರ್ಯಕ್ರಮ ಆಯೋಜಿಸಿದೆ. ಹಿರಿಯರು, ಕಿರಿಯರು ಸೇರಿದಂತೆ ಎಲ್ಲಾ ವರ್ಗದ ಜನರು ಯೋಗಾಭ್ಯಾಸ ಮಾಡಿ ಆರೋಗ್ಯವಂತರಾಗಿರಲಿ ಎಂದು ಮನವಿ ಮಾಡುತ್ತೇನೆ.