ಬೆಳಗಾವಿ : ತಿರುಪತಿಯಿಂದ ಬೆಳಗಾವಿಗೆ ಸೋಮವಾರ ಬರಬೇಕಾಗಿದ್ದ ಸ್ಟಾರ್ ಏರ್‌ಲೈನ್ಸ್‌‌ ವಿಮಾನ ರದ್ದುಗೊಂಡ ಪರಿಣಾಮ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ತಿರುಪತಿಯಿಂದ ಬೆಳಗಾವಿಗೆ ಟಿಕೆಟ್ ಬುಕಿಂಗ್ ಮಾಡಿದ್ದ ಪ್ರಯಾಣಿಕರು ನಿಲ್ದಾಣಕ್ಕೆ ಬಂದು ಕಾದು ಕುಳಿತಾಗ ವಿಮಾನ ರದ್ದಾಗಿರುವ ಬಗ್ಗೆ ಸ್ಟಾರ್ ಏರ್ ಲೈನ್ಸ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಇದರಿಂದ ಪ್ರಯಾಣಿಕರು ಸಿಬ್ಬಂದಿಯೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾರೆ. ಮುನ್ಸೂಚನೆ ಇಲ್ಲದೆ ವಿಮಾನ ರದ್ದಾಗಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಸೋಮವಾರ ಸಂಜೆ 7:30ಕ್ಕೆ ಈ ವಿಮಾನ ತಿರುಪತಿಯಿಂದ ಬಿಡಬೇಕಿತ್ತು. ಆದರೆ ಮಧ್ಯಾಹ್ನ 3:30ಕ್ಕೆ ವಿಮಾನ ರದ್ದುಗೊಂಡಿರುವ ವಿಷಯ ತಿಳಿಸಲಾಗಿದೆ. ಇದರಿಂದ ಬೆಳಗಾವಿ ಜಿಲ್ಲೆಯ ಅಥಣಿ, ರಾಯಬಾಗ ಮುಂತಾದ ತಾಲೂಕುಗಳಿಗೆ ಹೋಗಬೇಕಾಗಿದ್ದ ಪ್ರಯಾಣಿಕರು ಪರದಾಡುವಂತಾಯಿತು. ಅಥಣಿ ತಾಲೂಕು ಶೇಗುಣಸಿ ಗ್ರಾಮದ ಮಹಾಂತೇಶ ಎಂಬುವರ ಸಂಬಂಧಿಕರು ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಗೆ ಆಗಮಿಸಬೇಕಾಗಿತ್ತು. ಆದರೆ ವಿಮಾನ ರದ್ದುಗೊಂಡಿರುವ ಪರಿಣಾಮ ಅವರು ತೊಂದರೆ ಅನುಭವಿಸಿದರು.