ಲಕ್ನೋ : ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯಲ್ಲಿ, ತಿಲೋಯ್ ತೆಹ್ಸಿಲ್‌ನ ಪುರೆ ಅಲ್ಲಾದೀನ್ ಗ್ರಾಮದ ಮುಸ್ಲಿಂ ಕುಟುಂಬವೊಂದು ತಮ್ಮ ಮಗಳ ಮದುವೆಗೆ ಹಿಂದೂ ಸಂಪ್ರದಾಯಗಳಿಗೆ ಅನುಗುಣವಾಗಿ ವಿಶಿಷ್ಟವಾದ ವಿವಾಹ ಆಮಂತ್ರಣ ಪತ್ರವನ್ನು ಮುದ್ರಿಸಿದೆ. ವಧು, ವರ ಮತ್ತು ಕುಟುಂಬದ ಸದಸ್ಯರ ಹೆಸರುಗಳೊಂದಿಗೆ ಹಿಂದೂ ದೇವರುಗಳಾದ ಗಣೇಶ ಮತ್ತು ಕೃಷ್ಣನ ಚಿತ್ರಗಳನ್ನು ಒಳಗೊಂಡಿರುವ ಮದುವೆ ಕಾರ್ಡ್ ಮುದ್ರಿಸಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಟೈಗರ್ ಎಂದು ಕರೆಯಲ್ಪಡುವ ವಧುವಿನ ತಂದೆ ಶಬ್ಬೀರ್ ಎಂಬವರು ತಮ್ಮ ಮಗಳು ಸೈಮಾ ಬಾನೊ ಅವರನ್ನು ರಾಯ್ಬರೇಲಿಯ ಮಹಾರಾಜ ಗಂಜ್‌ ಪ್ರದೇಶದ ಸೆನ್ಪುರ್ ಗ್ರಾಮದ ಇರ್ಫಾನ್ ಅವರಿಗೆ ಮದುವೆ (ನಿಖಾಹ್) ‌ ಮಾಡಿಕೊಡುತ್ತಿದ್ದಾರೆ. ತಾನು ಎರಡು ರೀತಿಯ ಮದುವೆ ಕಾರ್ಡ್‌ಗಳನ್ನು ಮುದ್ರಿಸಿದ್ದೇನೆ. ಒಂದು ಕಾರ್ಡ್‌ ಒಂದು ಹಿಂದೂ ಸಂಪ್ರದಾಯಗಳನ್ನು ಅನುಸರಿಸುವ ಮದುವೆ ಕಾರ್ಡ್‌ ಮುದ್ರಣ ಮಾಡಿದ್ದರೆ ಇನ್ನೊಂದು ಇಸ್ಲಾಮಿಕ್ ಸಂಪ್ರದಾಯಗಳೊಂದಿಗೆ ಹೊಂದಾಣಿಕೆಯಾಗುತ್ತದೆ ಎಂದು ಶಬ್ಬೀರ್‌ ಹೇಳಿದ್ದಾರೆ.

ಸಾಮರಸ್ಯದ ಸಾಂಕೇತ ನೀಡುವ ಈ ಕಾರ್ಡ್ ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. “ನಾನು ನನ್ನ ಮಗಳ ಮದುವೆ ಕಾರ್ಡ್ ಅನ್ನು ಎರಡು ರೀತಿಯಲ್ಲಿ ಮುದ್ರಿಸಿದ್ದೇನೆ. ಒಂದು ಹಿಂದೂ ಧರ್ಮದ ಸಂಪ್ರದಾಯಕ್ಕೆ ಅನುಸಾರವಾಗಿ ಹಾಗೂ ಇನ್ನೊಂದು ನನ್ನ ಧರ್ಮದ ಸಂಪ್ರದಾಯಕ್ಕೆ ಅನುಸಾರವಾಗಿ ಮುದ್ರಿಸಿದ್ದೇನೆ. ನಾನು ಹಿಂದೂ ಸ್ನೇಹಿತರಿಗೆ ಹಿಂದೂ ಸಂಪ್ರಾದಯದ ಕಾರ್ಡ್‌ಗಳನ್ನು ನೀಡಿ ಮದುವೆಗೆ ಆಹ್ವಾನಿಸಿದ್ದೇನೆ. ಮತ್ತು ಮುಸ್ಲಿಮರಿಗೆ ಮುಸ್ಲಿಂ ಸಂಪ್ರದಾಯದಂತೆ ಮುದ್ರಿತವಾದ ಕಾರ್ಡ್‌ಗಳನ್ನು ನೀಡುತ್ತಿದ್ದೇನೆ. ಧರ್ಮದ ವಿಷಯದಲ್ಲಿ ನಮಗೆ ಯಾವುದೇ ತೊಂದರೆಯಿಲ್ಲ.. ನಾವು ಒಗ್ಗಟ್ಟಿನಿಂದ ಬದುಕುತ್ತೇವೆ ಎಂದು ಶಬ್ಬೀರ್‌ ಹೇಳಿದ್ದಾರೆ. ನಮ್ಮೆಲ್ಲರ ದೇವರು ಒಂದೆ. ಆದರೆ ಪೂಜಿಸುವ ರೀತಿ ಬೇರೆಬೇರೆ ಅಷ್ಟೇ ಎಂದು ಶಬ್ಬೀರ್ ಹೇಳಿದ್ದಾರೆ.
ಇದು ಹಿಂದೂ-ಮುಸ್ಲಿಂ ಐಕ್ಯತೆಯ ಮನೋಭಾವವನ್ನು ನೆನಪಿಸುತ್ತದೆ ಮತ್ತು ಇದು ಕೋಮು ಸೌಹಾರ್ದತೆಯ ಸಂದೇಶವನ್ನು ಹರಡುತ್ತದೆ ಎಂದು ಶಬ್ಬೀರ್ ಆಶಿಸಿದ್ದಾರೆ.