*ಕಲಾತ್ಮಕ ಯೋಗಾಸನಗಳನ್ನು ಕರತಲಾಮಲಕವಾಗಿ ಮಾಡಿ ನೋಡುಗರನ್ನು ಮಂತ್ರಮುಗ್ಧಗೊಳಿಸುವ ಶಿವಾನಿ. ನೂರಾರು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದ ಶಿವಾನಿ. ಕಲಾತ್ಮಕ ಯೋಗಾಸಗಳ ಸ್ಪರ್ಧೆಗಳಲ್ಲಿ ಬಹುಮಾನಿತೆ ಶಿವಾನಿ.
ಹಲವಾರು ಸಂಘ ಸಂಸ್ಥೆಗಳಲ್ಲಿ ಸನ್ಮಾನಿತೆ ಶಿವಾನಿ. ಹಿರಿಯ ಗಣ್ಯರಿಂದ, ಗುರುಸದೃಶರಿಂದ ಮಾನಿತೆ ಶಿವಾನಿ.ವಿದ್ಯೋದಯ ಪಬ್ಲಿಕ್ ಶಾಲೆಯಲ್ಲಿ ಕಲಿಕೆಯಲ್ಲೂ ಮುಂದಿರುವ ಶಿವಾನಿ..ಭರತನಾಟ್ಯ, ಯಕ್ಷಗಾನ, ಚಿತ್ರಕಲೆಗಳನ್ನೂ(ಇನಾಯತ್ ಆರ್ಟ್ ಸ್ಕೂಲ್) ತದಾತ್ಮಕತೆಯಿಂದ ಅಭ್ಯಾಸಿಸುತ್ತಿರುವ ಶಿವಾನಿ.(ಹೆಬ್ರಿ ತಾಲ್ಲೂಕಿನ ಕುಚ್ಚೂರು) ಸುಜಾತ – ಶಿವಾನಂದ ಶೆಟ್ಟಿಯವರ ಏಕಮಾತ್ರ ತನುಜಾತೆ ಶಿವಾನಿ. ಇಷ್ಟೆಲ್ಲಾ ಸಾಧಿಸಿರುವ ಸಾಧಕಿ ಹನ್ನೊಂದರ ಬಾಲಕಿ.*
*ಮನ ಮುದಗೊಳಿಸುವ ಚಿತ್ರಗಳನ್ನು ಸೃಜಿಸುತ್ತಿದ್ದಾಳೆ ಶಿವಾನಿ. ಮಾತೆಯ ಮಾತಿಗೆ ಮನ್ನಣೆಯಿತ್ತು ಮನಸಾರೆ ಚಿತ್ರಿಸಿದ ತಾಯಿ ಮಗುವಿನ ಚಿತ್ತಾರಗಳು ಮನಸೆಳೆಯುತ್ತವೆ. ಕಾಪು ದೀಪಸ್ತಂಭದ ಚಿತ್ತಾರ ನಯನ ಮನೋಹರವಾಗಿವೆ. ಯೋಗಾಸನದಂತೆ ಚಿತ್ರಕಲೆಯಲ್ಲೂ ಮಿಂಚಲಿ ಈ ಪುಟ್ಟ ನಕ್ಷತ್ರ.
ಯಕ್ಷರಂಗದಲ್ಲೂ ಹೆಜ್ಜೆಗುರುತು ಮೂಡಿಸಲಿ ಈ ಯಕ್ಷಿಣಿ. ಭರತನಾಟ್ಯದ ನೂಪುರಗಳ ಸ್ವರತರಂಗಗಳು ಅನುರಣಿಸಲಿ ಬಾಲ ನೃತ್ಯಗಾತಿಯಿಂದ. ಶಿವಾನಿಗೆ ಸರ್ವ ತೆರನಾದ ಶುಭಗಳಿರಲಿ ಎಂದು ಹಾರೈಸುತ್ತ…..*
*✍️ಉದಯ ಬಿ. ಶೆಟ್ಟಿ, ಪಂಜಿಮಾರು.*