ಬೆಳಗಾವಿ: ಅಪಘಾತ ಎಂದು ಬಿಂಬಿಸಿ ವ್ಯಕ್ತಿಯೊಬ್ಬರನ್ನು ಕೊಲೆಗೈದ ಪ್ರಕರಣವನ್ನು ಕೊನೆಗೂ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಮೀನು ವಿವಾದ ಸಂಬಂಧ ಈ ಕೊಲೆ ನಡೆದಿದೆ ಎನ್ನುವುದು ಪೊಲೀಸ್ ತನಿಖೆ ವೇಳೆ ಬಹಿರಂಗವಾಗಿದೆ. ಬೈಕ್ ಮೇಲೆ ಹೊರಟಿದ್ದ ವ್ಯಕ್ತಿಯೊಬ್ಬರಿಗೆ ಯಾರೋ ಬೊಲೆರೋ ಗೂಡ್ಸ್ ವಾಹನದಿಂದ ಗುದ್ದಿಸಿ ಅಪಘಾತ ಮಾಡಿದ್ದಾರೆ ಎಂದು ಬಿಂಬಿಸಲಾಗಿತ್ತು. ಆದರೆ, ಕಾಗವಾಡ ಪೊಲೀಸರು ಇದು ಅಪಘಾತ ಅಲ್ಲ, ಕೊಲೆ ಎನ್ನುವುದನ್ನು ತನಿಖೆ ವೇಳೆ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ಮತ್ತೊಬ್ಬ ನಾಪತ್ತೆಯಾಗಿದ್ದಾನೆ.

ಸಂಬರಗಿಯ ಮಾಣಿಕ್ ಕೇಶವ ಕದಂ(53) ಇತ್ತೀಚಿಗೆ ಹತ್ಯೆಗೀಡಾಗಿದ್ದರು. ಅದೇ ಗ್ರಾಮದ ಲಕ್ಷ್ಮಣ ಸುಲ್ತಾನ್ ಸೊಡ್ಡಿ, ರಾಮ ಸುಲ್ತಾನ್ ಸೊಡ್ಡಿ, ಅನಿಲ್ ಗೋವಿಂದ ಕಂಟೇಕರ, ಸಾಂಗ್ಲಿಯ ಮೀರಜ್ ತಾಲೂಕಿನ ಕಥವಾ ಗ್ರಾಮದ ಸುಭಾಷ್ ಅಮಾಸಿದ ಸಿಂಗಾಡೆ ಬಂಧಿತರು. ಮತ್ತೊಬ್ಬ ಭರಮಣ್ಣ ಸುಲ್ತಾನ್ ಸೊಡ್ಡಿ ತಲೆಮರೆಸಿಕೊಂಡಿದ್ದಾನೆ.

ಹತ್ಯೆಯಾದ ಮಾಣಿಕ ಕದಂ ತಮ್ಮ ಆರು ಎಕರೆ ಜಮೀನನ್ನು ಬರಮಣ್ಣ ಸೊಡ್ಡಿಗೆ ಮಾರಾಟ ಮಾಡಿದ್ದರು. ಆದರೆ, ದಾಖಲೆಯಲ್ಲಿ ಹೆಸರು ಸೇರ್ಪಡೆಯಾಗಿರಲಿಲ್ಲ. ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಉಂಟಾಗಿ ಮಾಣಿಕ್ ಅವರನ್ನು ಕೊಲೆ ಮಾಡಲು ಮೂವರು ಸಹೋದರರು ಸೇರಿ ಸಂಚು ರೂಪಿಸಿ ಜುಲೈ 11 ರಂದು ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಮಾಣಿಕ್ ಅವರಿಗೆ ಹಿಂದಿನಿಂದ ತಮ್ಮ ಪಿಕಪ್ ಗೂಡ್ಸ್ ವಾಹನ ಹರಿಸಿ ಕೊಲೆ ಮಾಡಿ ಇದನ್ನು ಅಪಘಾತ ಎಂಬಂತೆ ಬಿಂಬಿಸಿದ್ದರು.

ಈ ಬಗ್ಗೆ ಮಾಣಿಕ್ ಅವರ ಮಗ ಗಣೇಶ ಮಾಣಿಕ್ ಕದಂ ಅವರು ಕಾಗವಾಡ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಇದು ಅಪಘಾತ ಅಲ್ಲ ಕೊಲೆ ಎಂದು ಸಾಬೀತುಪಡಿಸುವಲ್ಲಿ ಕೊನೆಗೂ ಯಶಸ್ವಿಯಾಗಿ ಇರುವುದು ವಿಶೇಷ.