ಕುಮಟಾ:
ಕುಮಟಾ ತಾಲೂಕಿನ ಸಾಂತಗಲ್ ಗ್ರಾಮದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ಕುಮಟಾದ ಹೆಡ್‌ಬಂದರಿನಲ್ಲಿ ಸಮುದ್ರಕ್ಕೆ ಹಾರಿದ್ದಳು ಎಂಬ ಪ್ರಕರಣಕ್ಕೆ ಈಗ ಹೊಸ ತಿರುವ ಪಡೆದುಕೊಂಡಿದೆ.

ತನ್ನ ಎರಡು ಮಕ್ಕಳನ್ನ ನಡು ರಸ್ತೆಯಲ್ಲಿ ಬಿಟ್ಟು ಸಮುದ್ರದಲ್ಲಿ ಮುಳುಗಿದ ನಾಟಕವಾಡಿದ್ದ ಸಾಂತಗಲ್ ಗ್ರಾಮದ ನಿವೇದಿತಾ ಭಂಡಾರಿ ಹೊನ್ನಾವರದ ಬಾಡಿಗೆ ಮನೆಯಲ್ಲಿರುವಾಗ ಪೊಲೀಸರ ಕೈಗೆ ಸಿಕ್ಕಿ ಬಿದಿದ್ದಾಳೆ.

ನಿವೇದಿತಾ ನಾಗರಾಜ ಭಂಡಾರಿ ಸಮುದ್ರಕ್ಕೆ ಹಾರಿಲ್ಲ, ಆಕೆ ಮಾಡಿದ್ದು ನಾಟಕ ಎಂಬುದು ಈಗ ಬಯಲಾಗಿದೆ.
ಕುಮಟಾದ ಸಾಂತಗಲ್ ಗ್ರಾಮದ ನಿವೇದಿತಾ ನಾಗರಾಜ ಭಂಡಾರಿ ಮಕ್ಕಳನ್ನು ಪಿಕ್‌ ಅಪ್‌ ಬಸ್ ನಿಲ್ದಾಣದಲ್ಲಿ ಬಿಟ್ಟು, ಕುಮಟಾದ ಹೆಡ್‌ಬಂದರ್ ಸಮುದ್ರದ ಬಳಿ ತಾನು ತಂದಿದ್ದ ಸ್ಕೂಟಿಯಲ್ಲಿ ಮಾಂಗಲ್ಯ, ಕಾಲುಂಗುರ, ಮೊಬೈಲ್ ಇಟ್ಟು ತಾನು ಸಮುದ್ರಕ್ಕೆ ಹಾರಿದಂತೆ ಬಿಂಬಿಸಿಕೊಂಡಿದ್ದಳು. ಆಕೆ ವೇಲ್‌ ಸಮುದ್ರದಲ್ಲಿ ತೇಲುತ್ತಿತ್ತು. ಹೀಗಾಗಿ ಅವಳು ಸಮುದ್ರಕ್ಕೆ ಹಾರಿದ್ದಾಳೆ ಎಂದು ಭಾವಿಸಲಾಗಿತ್ತು.

ಸಮುದ್ರದಲ್ಲಿ ಆಕೆಯ ವೇಲ್ ಬಿದ್ದು ತೇಲುತ್ತಿದ್ದುದ್ದನ್ನು ಕಂಡು ಲೈಫ್ ಗಾರ್ಡ್‌ ಗಳು, ಪೊಲೀಸರು ಸಮುದ್ರದಲ್ಲಿ ದಿನಗಟ್ಟಲೆ ಅವಳಿಗಾಗಿ ಜಾಲಾಡಿದ್ದಾರೆ. ಆದರೆ ಸಿಕ್ಕಿರಲಿಲ್ಲ. ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆ ಕೈಗೊಂಡ ಪಿಎಸ್‌ಐ ನವೀನ್ ನೇತೃತ್ವದ ತಂಡ ಸಮುದ್ರ ಜಾಲಾಡಿದ ನಂತರ ಸಮುದ್ರಕ್ಕೆ ಹಾರಿದ ಬಗ್ಗೆ ಯಾವುದೇ ಕುರುಹು ಸಿಗದಿದ್ದಾಗ ಬೇರೆ ರೀತಿಯಲ್ಲೂ ತನಿಖೆ ಕೈಗೊಂಡಿದ್ದರು.
ಆಕೆಗೆ ಬೇರೆ ಯಾರ ಜೊತೆ ಆದ್ರೂ ಸಂಪರ್ಕ ಇದೆಯಾ ಎಂದು ಪೊಲೀಸರು ಜಾಲಾಡಿದ್ದಾರೆ. ಆಗ ಆಟೋ ಒಂದನ್ನು ಕುಮಟಾ ಹೆಡ್ ಬಂದರ್‌ ಬಳಿ ತಂದು ನಿಲ್ಲಿಸಿಕೊಂಡಿದ್ದು ಗೊತ್ತಾಗಿದೆ.

 

ಪೊಲೀಸರು ತನಿಖೆ ನಡೆಸಿ ಈ ಪ್ರಕರಣವನ್ನು ಭೇದಿಸಿದ್ದು, ತನಿಖೆ ನಡೆಸಿದಾಗ ನಿವೇದಿತಾ ಭಂಡಾರಿ ಮನೆಯವರ ದಿಕ್ಕು ತಪ್ಪಿಸಲು ಆತ್ಮಹತ್ಯೆ ನಾಟಕವಾಡಿ ಆಟೋ ಹತ್ತಿ ಹೊನ್ನಾವರಕ್ಕೆ ಪರಾರಿಯಾಗಿ ಅಲ್ಲಿನ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿರುವುದು ಗೊತ್ತಾಗಿದೆ. ಇದೀಗ ಆಕೆಯನ್ನು ಪೊಲೀಸರು ಕರೆತಂದಿದ್ದಾರೆ.

ಮನೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ :
ನಿವೇದಿತಾ ಅವರು ಅವರು ತಮ್ಮ ಇಬ್ಬರು ಮಕ್ಕಳನ್ನು ಕರೆದುಕೊಂಡು ಸ್ಕೂಟಿಯಲ್ಲಿ ಮನೆ ಬಿಟ್ಟಿದ್ದರು. ಇವರು ನವೆಂಬರ್ 25ರಂದು ಒಮ್ಮಿಂದೊಮ್ಮೆಗೆ ನಾಪತ್ತೆಯಾಗಿದ್ದರು.

ಪೊಲೀಸರ ತನಿಖೆ ವೇಳೆ ಮನೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ, ವೈಮನಸ್ಸು ಇದ್ದಿದ್ದು ಗೊತ್ತಾಗಿದೆ. ಹೀಗಾಗಿ ಗಂಡ ಮತ್ತು ಮನೆಯವರನ್ನು ಹೆದರಿಸುವ ಉದ್ದೇಶದಿಂದ ಅವರು ಆತ್ಮಹತ್ಯೆ ನಾಟಕವಾಡಿರಬಹುದು ಎಂಬ ಸಂಶಯ ಬಂದಿದೆ.

ಸಮುದ್ರಕ್ಕೆ ಹಾರಿಲ್ಲ ಎಂದರೆ ಎಲ್ಲಿ ಹೋಗಿರಬಹುದು ಎಂಬ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿದಾಗ ಹಲವು ಕಡೆ ಹುಡುಕಲಾಯಿತು. ಕೊನೆಗೂ ಆಕೆ ಎಲ್ಲಾದರೂ ಇರಬಹುದು ಎನ್ನುವ ಪೊಲೀಸ್‌ ಸಂಶಯ ನಿಜವಾಯಿತು. ಆಕೆ ಹೊನ್ನಾವರದ ಬಾಡಿಗೆ ಮನೆಯೊಂದರಲ್ಲಿ ಅವಿತು ಕುಳಿತಿದ್ದರು.

ಮನೆಯವರಿಗೆ ಪಾಠ ಕಲಿಸುವ ಉದ್ದೇಶದಿಂದ ನಿವೇದಿತಾ ಈ ರೀತಿ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ, ಪುಟ್ಟ ಮಕ್ಕಳನ್ನು ರಸ್ತೆಯಲ್ಲಿ ಬಿಟ್ಟು ಹೋದ ಉದ್ದೇಶವೇನು ಎನ್ನುವುದು ಸ್ಪಷ್ಟವಿಲ್ಲ. ಕುಮಟಾ ಸಿಪಿಐ ತಿಮ್ಮಪ್ಪ ನೇತೃತ್ವದ ಪೊಲೀಸ್ ತಂಡದಿಂದ ಮಹಿಳೆಯನ್ನು ಬಂಧಿಸಲಾಗಿದ್ದು, ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.