ಬೆಳಗಾವಿ : ಜಗತ್ತಿನಲ್ಲಿ ಅತ್ಯಂತ ಹೆಚ್ಚು ಚರ್ಚೆ ಹಾಗೂ ವಿಮರ್ಶೆಗೆ ಒಳಪಟ್ಟಂತ ಒಂದು ಜೀವಿಯೆಂದರೆ ಅದು ಹೆಣ್ಣು ಎಂದು ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ ವಿಷಾದ ವ್ಯಕ್ತಪಡಿಸಿದರು.

ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ರಂದು ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಕೋಶದ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದ ಶಕ್ತಿಯೇ ನಾರಿ ಶಕ್ತಿ. ಅವಳ ಅಭಿವೃದ್ಧಿ ದೇಶದ ಅಭಿವೃದ್ಧಿ. ನಾರಿಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸುತ್ತಿದ್ದರೂ ಅವರ ಶಕ್ತಿ, ಯುಕ್ತಿ ಪ್ರತಿ ಕ್ಷೇತ್ರಕ್ಕೂ ಇನ್ನಷ್ಟು ಬಂದಾಗ ದೇಶದ ಶಕ್ತಿ ವೃದ್ಧಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಸರ್ಕಾರ ಸಮಾಜ ಹೆಚ್ಚು ಗಮನ ಹರಿಸಬೇಕು.

ಹೆಣ್ಣಿನ ಗುಣ, ಸ್ವಭಾವ ಹಾಗೂ ಸೌಂದರ್ಯವನ್ನು ಕವಿ, ಚಿತ್ರಕಾರ ಹಾಗೂ ಬರಹಗಾರರು ವಸ್ತು -ವಿಷಯವನ್ನಾಗಿ ಬಳಸಿಕೊಂಡಿದ್ದರು. ಈ ಆಧುನಿಕ ಜಗತ್ತಿನಲ್ಲಿ ಹೆಣ್ಣಿಗೆ ಕ್ರಮೇಣ ಮಹತ್ವ ಹಾಗೂ ಮನ್ನಣೆ ಸಿಗುತ್ತಿದೆ. ಪ್ರತಿ ಹೆಣ್ಣು ಆರ್ಥಿಕ ಸ್ವಾವಲಂಬಿಯಾಗಿ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಆಕೆ ನೈಸರ್ಗಿಕ, ಬೌದ್ಧಿಕ ಹಾಗೂ ಸೈದ್ಧಾಂತಿಕ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಬೇಕು. ಆಗ ಮಾತ್ರ ಮಹಿಳೆ ಸಬಲಳಾಗುತ್ತಾಳೆ. ಇವೆಲ್ಲದರ ಜೊತೆಗೆ ಜಾಗತಿಕ ಮಹಿಳೆಯಾಗುವತ್ತ ಗಮನ ಹರಿಸಬೇಕು. ಅದಕ್ಕೆ ಬೇಕಾಗುವ ಇಂಗ್ಲಿಷ್ ಭಾಷೆ, ತಂತ್ರಜ್ಞಾನ ಇನ್ನಿತರ ಪೂರಕ ಅಂಶಗಳನ್ನು ಅವಳು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಎಂ. ಜಿ. ಹೆಗಡೆ ಮಾತನಾಡಿ, ನಮ್ಮ ಮಹಾವಿದ್ಯಾಲಯದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇಕಡಾ ಎಪ್ಪತ್ತರಷ್ಟು ವಿದ್ಯಾರ್ಥಿನಿಯರಿದ್ದಾರೆ. ಆದ್ದರಿಂದ ಇಲ್ಲಿ ಪ್ರತಿದಿನ ಮಹಿಳಾ ದಿನಾಚರಣೆಯ ಸಂಭ್ರಮವಿರುತ್ತದೆ. ವಿದ್ಯಾರ್ಥಿನಿಯರು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಎಲ್ಲ ಕಾರ್ಯಕ್ರಮಗಳ ಲಾಭವನ್ನು ಪಡೆದುಕೊಳ್ಳಬೇಕು. ಮಹಿಳೆಗೆ ಪ್ರಕೃತಿದತ್ತವಾಗಿ ಬಂದ ಅವಳ ಬದುಕುವ, ಅನುಭವಿಸುವ ಸ್ವಾತಂತ್ರ್ಯವನ್ನು ತಡೆಯುವುದು ಅಕ್ಷಮ್ಯ ಅಪರಾಧ ಎಂದರು.

ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಪ್ರತಿಭಾ ಮ್ಯಾಗೇರಿ ‘ನಿರ್ಭಯ’ ಆಧಾರಿತ ಏಕಪಾತ್ರಾಭಿನಯ ಮಾಡಿದರು.

ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಮಹಾವಿದ್ಯಾಲಯದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿನಿ ಪ್ರಿಯಾಂಕಾ ತಿಲಗಾರ್ ಪ್ರಾರ್ಥಿಸಿದರು. ಸೇಜಲ್ ಮಗದುಮ್ ಸ್ವಾಗತಿಸಿದರು, ಗಾಯತ್ರಿ ಹಲಗಿ ಪರಿಚಯಿಸಿದರು. ಭೂಮಿ ಸಂಗೊಳ್ಳಿ ವಂದಿಸಿದರು. ಶಾಂಭವಿ ಥೊರಲಿ ನಿರೂಪಿಸಿದರು. ಮಹಾವಿದ್ಯಾಲಯದ ಮಹಿಳಾ ಕೋಶದ ಸಂಯೋಜಕಿ, ಉಪನ್ಯಾಸಕಿ ಜಯಶ್ರೀ ಉಪರಿ ಮತ್ತು ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.