ಬೆಂಗಳೂರು: ನುಗ್ಗೆಕಾಯಿ ಪ್ರಣಯ ಪ್ರಿಯರ ಬಹು ನೆಚ್ಚಿನ ತರಕಾರಿ. ಹಾಗೆಯೇ ಆರೋಗ್ಯಕರ ಆಹಾರವೂ ಹೌದು. ಹೀಗಾಗಿ, ನಗರದಲ್ಲಿ ನುಗ್ಗೆಕಾಯಿ ಬಹುಬೇಡಿಕೆ ಪಡೆದುಕೊಂಡಿದೆ.

ರಾಜಧಾನಿ ಬೆಂಗಳೂರಿನಲ್ಲಿ ಬಹುತೇಕ ತರಕಾರಿಗಳ ಬೆಲೆ ಗಗನಕ್ಕೇರಿದೆ. ಅದರಲ್ಲಿಯೂ ನುಗ್ಗೆಕಾಯಿ ಕೆಜಿಗೆ 500 ರು. ಮುಟ್ಟಿದೆ. ಪ್ರತಿ ನುಗ್ಗೆಕಾಯಿ50 ರುಪಾಯಿಗೆ ಮಾರಾಟವಾಗುತ್ತಿದ್ದು, ಇಷ್ಟು ಬೆಲೆಗೆ ಈ ಹಿಂದೆ ನುಗ್ಗೆಕಾಯಿ ಮಾರಾಟವಾದ ಉದಾಹರಣೆಯೇ ಇಲ್ಲ.

ನಗರಕ್ಕೆ ನುಗ್ಗೆಕಾಯಿ ಹೆಚ್ಚಾಗಿ ಪೂರೈಕೆಯಾಗುವುದು ತಮಿಳು ನಾಡಿನಿಂದ. ಆದರೆ, ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದಿಂದ ಬೆಳೆ ನಾಶವಾಗಿದೆ. ಬಹುತೇಕ ತರಕಾರಿಗಳು ನಾಶವಾಗಿವೆ. ನುಗ್ಗೆಕಾಯಿ ಬೆಳೆಯೂ ಕೂಡ ನಾಶವಾಗಿದ್ದು, ನಗರಕ್ಕೆ ಪೂರೈಕೆ ಕಡಿಮೆಯಾಗಿದೆ.

ಈ ಹಿನ್ನೆಲೆಯಲ್ಲಿ ನುಗ್ಗೆಕಾಯಿ ಬೆಲೆ ಗಗನಕ್ಕೇರಿದ್ದು, ಮಹಾರಾಷ್ಟ್ರದಿಂದ ತರಿಸಲಾಗುತ್ತಿದೆ.

ಬೆಳೆಯುವ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಹಾಸನದಲ್ಲಿ ಅಕಾಲಿಕ ಮಳೆಯಾಗಿದ್ದು, ಬೆಳೆ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ತರಕಾರಿ ಬೆಲೆ ಹೆಚ್ಚಾಗಿದೆ.

ನುಗ್ಗೆಕಾಯಿ ಜೀರ್ಣಾಂಗ ವ್ಯವಸ್ಥೆ ಸುಧಾರಣೆಗೆ ಬಳಸುವ ಬಹುಮುಖ್ಯ ತರಕಾರಿಯಾಗಿದೆ. ನುಗ್ಗೆಕಾಯಿಯಲ್ಲಿ ಕೆಲವೊಂದು ಪ್ರಮುಖ ಪೋಷಕಾಂಶಗಳಿದ್ದು, ನಿಯಮಿತವಾಗಿ ಸೇವನೆ ಮಾಡಿದರೆ ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡುವುದು, ಅಷ್ಟೇ ಅಲ್ಲದೇ ಇದರಲ್ಲಿ ವಿಟಮಿನ್ ಸಿ ಇರುವ ಕಾರಣ ಜ್ವರ, ಗಂಟಲ ಬೇನೆ, ಕೆರೆತ, ಶೀತ ಮೊದಲಾದ ಕಾಯಿಲೆಗಳನ್ನು ನಿಯಂತ್ರಿಸ ಬಹುದು.

ಬಂಜೆತನ ನಿವಾರಣೆ, ಮೂಳೆಗಳ ಬಲವರ್ಧನೆಗೆ ನುಗ್ಗೆಕಾಯಿ ಬಹಳ ಉತ್ತಮವಾದ ತರಕಾರಿಯಾಗಿದೆ. ಶ್ವಾಸಕೋಶದ ಸಮಸ್ಯೆ, ಮೂತ್ರಕೋಶದ ಸಮಸ್ಯೆ ನಿವಾರಣೆಗೆ ನುಗ್ಗೆಕಾಯಿ ಬಳಕೆ ಉತ್ತಮ ಪರಿಹಾರ ಎನ್ನಬಹುದು. ಹಾಗಾಗಿ, ನುಗ್ಗೆಕಾಯಿ ಬಹುಬೇಡಿಕೆಯ ತರಕಾರಿಯಾಗಿದೆ.