ಬೆಳಗಾವಿ : ಕೆಎಲ್ಇ ಸಂಸ್ಥೆಯ ಸ್ವತಂತ್ರ ಪದವಿಪೂರ್ವ ಕಾಲೇಜಿನ ವತಿಯಿಂದ ನಗರದ ಬಿ.ಎಸ್. ಜೀರಗೆ ಸಭಾಗೃಹದಲ್ಲಿ ದಿನಾಂಕ 27-10-2024ರಂದು 10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ SSLC ಮುಗಿದ ನಂತರ ಮುಂದಿನ ಶಿಕ್ಷಣ ಕ್ಷೇತ್ರದಲ್ಲಿ ಇರುವ ಅನೇಕ ಅವಕಾಶಗಳ ಕುರಿತು ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕೆಎಲ್ ಇ ಸಂಸ್ಥೆಯ ನಿರ್ದೇಶಕ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಮಕ್ಕಳು ಇತರೆ ಮಕ್ಕಳಿಗಿಂತ ವೈಯಕ್ತಿಕ ಭಿನ್ನತೆಯನ್ನು ಹೊಂದಿದ್ದು ಪ್ರತಿಯೊಬ್ಬ ತಂದೆ-ತಾಯಿಗಳು ತಮ್ಮ ಮಕ್ಕಳ ಮನಸ್ಥಿತಿಯನ್ನು ಅರಿತುಕೊಂಡು ಮಕ್ಕಳು ಇಚ್ಚಿಸಿದ ವಿಷಯಗಳ ಅಧ್ಯಯನಕ್ಕೆ ಪ್ರೋತ್ಸಾಹ ನೀಡಬೇಕೆಂದು ತಿಳಿಸಿದರು. ವಿದ್ಯಾರ್ಥಿಗಳು ತಂದೆ-ತಾಯಿಗಳ ಹಾಗೂ ಶಿಕ್ಷಕರ ಸಲಹೆ ಮಾರ್ಗದರ್ಶನವನ್ನು ಪಡೆದುಕೊಂಡು ತಮ್ಮ ಗುರಿಯನ್ನು ಮುಟ್ಟಲು ಪರಿಶ್ರಮಿಸಬೇಕೆಂದು ತಿಳಿಸಿದರು.
ಕೋವಿಡ್ ನಂತರದ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳು ಲಭ್ಯವಿದ್ದು ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಎನ್. ವೆಂಕಟೇಶ್ವರ ರಾವ್, ಎನ್ ಎ ಆರ್ ಎಲ್ ಬಾಹ್ಯಾಕಾಶ ವಿಭಾಗ ತಿರುಪತಿ, ಇವರು ವಿಜ್ಞಾನ ಕ್ಷೇತ್ರದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಮೇಕ್ ಇನ್ ಇಂಡಿಯಾದ ಸಂದರ್ಭದಲ್ಲಿ ದೊರೆಯುವ ಅವಕಾಶಗಳು. ಪ್ರಸ್ತುತ ರೇಲ್ವೆ ತಂತ್ರಜ್ಞಾನ ಹಾಗೂ ಹಡಗು ನಿರ್ಮಾಣ ಕ್ಷೇತ್ರಗಳಲ್ಲಿ ಮುಂದೆ ಸಿಗಬಹುದಾದಂತಹ ಉದ್ಯೋಗಗಳ ಬಗ್ಗೆ ಮಾಹಿತಿ ನೀಡಿದರು.ಡಾ. ಸಂಜಯ ಪೋರವಾಲ ಅವರು ವೈದ್ಯಕೀಯ ಶಿಕ್ಷಣದ ಮಹತ್ವವನ್ನು ಸವಿವರವಾಗಿ ತಿಳಿಸಿದರು. ಎಸ್ಎಸ್ಎಲ್ ಸಿ ಹಾಗೂ ಕೆಎಲ್ಇ ವಿದ್ಯಾರ್ಥಿ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಒಟ್ಟಾರೆಯಾಗಿ 17.26,600 ರೂಪಾಯಿಗಳ ವಿದ್ಯಾರ್ಥಿ ವೇತನವನ್ನು ಮಕ್ಕಳಿಗೆ ನೀಡಲಾಯಿತು.
ಮಹಾವಿದ್ಯಾಲಯದ ಪ್ರಾಚಾರ್ಯ ವೇಣುಗೋಪಾಲ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಲಕ್ಕನ್ನವರ ಹಾಗೂ ರಜನಿ ಅಥಣಿಮಠ ನಿರೂಪಿಸಿದರು.