ಛತ್ತರ್‌ಪುರ(ಮಧ್ಯಪ್ರದೇಶ): ಜಿಲ್ಲೆಯಲ್ಲಿ ಶುಕ್ರವಾರ(ಡಿ6) ಮಧ್ಯಾಹ್ನ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಕಾಲೇಜಿನ ಪ್ರಾಂಶುಪಾಲರನ್ನು ಗುಂಡಿಕ್ಕಿ ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಧ್ಯಾಹ್ನ 1:30ರ ಸುಮಾರಿಗೆ ಶಾಲೆಯ ಶೌಚಾಲಯದ ಪ್ರವೇಶ ದ್ವಾರದಲ್ಲಿ ಗುಂಡಿನ ದಾಳಿ ನಡೆದಿದೆ. ಅದೇ ಸಂಸ್ಥೆಯ ವಿದ್ಯಾರ್ಥಿಯಾಗಿರುವ ಆರೋಪಿ ಶೂಟರ್ ಮತ್ತು ಆತನ ಸಹಚರರು ಮೃತ ಪ್ರಾಂಶುಪಾಲರ ಸ್ಕೂಟರ್‌ನಲ್ಲೇ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆಗಮ್ ಜೈನ್ ತಿಳಿಸಿದ್ದಾರೆ.
ಧಾಮೋರಾ ಸರಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಮಧ್ಯಾನ 12ನೇ ತರಗತಿಯ ವಿದ್ಯಾರ್ಥಿ ತನಗೆ ವಿದ್ಯೆ ಕಲಿಸಿದ ಪ್ರಾಂಶುಪಾಲರ ಹಣೆಗೆ ಗುರಿಯಿಟ್ಟು ಗುಂಡಿನ ದಾಳಿ ನಡೆಸಿದ್ದಾನೆ. ಕಳೆದ ಐದು ವರ್ಷಗಳಿಂದ ಪ್ರಾಂಶುಪಾಲರಾಗಿದ್ದ ಧಮೋರಾ ಸರಕಾರಿ ಪ್ರೌಢಶಾಲೆಯ ಶೌಚಾಲಯಕ್ಕೆ ಆಗಮಿಸಿದ್ದ ವೇಳೆ ಎಸ್.ಕೆ.ಸಕ್ಸೇನಾ (55) ಅವರ ಹಣೆಗೆ ಗುರಿಯಾಗಿಸಿ ಗುಂಡು ಹಾರಿಸಿ ಹತ್ಯೆಗೈಯಲಾಗಿದೆ. ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪ್ರಭಾರಿ ಜಿಲ್ಲಾ ಶಿಕ್ಷಣಾಧಿಕಾರಿ ಆರ್.ಪಿ.ಪ್ರಜಾಪತಿ ತಿಳಿಸಿದ್ದಾರೆ.
ಹತ್ಯೆಗೆ ಕಾರಣ ಏನು ಎಂಬುದು ತನಿಖೆಯಿಂದ ತಿಳಿದು ಬರಬೇಕಷ್ಟೆ. ಆರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.