
ಬೆಳಗಾವಿ: ‘ಸಮ ಸಮಾಜ ನಿರ್ಮಾಣವಾದರೆ ಸ್ವಾಮಿ ವಿವೇಕಾನಂದರ ಕನಸು ನನಸಾದಂತೆ’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಇಲ್ಲಿನ ರಾಮಕೃಷ್ಣ ಮಿಷನ್ ಆಶ್ರಮದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆಶ್ರಮದ ರಜತೋತ್ಸವದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗ್ರಾಮೀಣ ಭಾಗದಲ್ಲಿ ಅಸ್ಪೃಶ್ಯತೆ ಇಂದಿಗೂ ತಾಂಡವವಾಡುತ್ತಿದೆ. ನಾವೆಲ್ಲರೂ ಒಂದೇ ಎಂಬ ಮನೋಭಾವ ಎಲ್ಲರಲ್ಲೂ ಇನ್ನೂ ಬಂದಿಲ್ಲ. ಅದು ಬಂದಾಗ ನಾವೆಲ್ಲರೂ ವಿವೇಕಾನಂದರ ಸಂದೇಶಗಳನ್ನು ಪರಿಪೂರ್ಣವಾಗಿ ಪಾಲಿಸಿದಂತಾಗುತ್ತದೆ’ ಎಂದರು.
‘ಸಮಾಜದಲ್ಲಿ ಎಲ್ಲರೂ ಕೂಡಿಕೊಂಡು ಮುಂದೆಸಾಗುವ ಮನೋಭಾವ ಬಲಗೊಳ್ಳಬೇಕು. ಬಡತನ ಕಡಿಮೆಯಾಗಿ ಸಮೃದ್ಧ ರಾಷ್ಟ್ರ ನಿರ್ಮಾಣವಾಗಬೇಕು. ವಿವೇಕಾನಂದರ ಚಿಂತನೆಗಳು ಭಾರತದ ಪ್ರಗತಿಗೆ ಪೂರಕವಾಗಿವೆ. ಮಾನವೀಯ ಸೇವೆಯಲ್ಲೇ ಅವರು ದೇವರನ್ನು ಕಂಡಿದ್ದಾರೆ’ ಎಂದು ಸ್ಮರಿಸಿದರು.
‘ವಿವೇಕಾನಂದರ ಸಂದೇಶಗಳನ್ನು ಪ್ರಸಾರ ಮಾಡುವ ಮೂಲಕ ಈ ಭಾಗದಲ್ಲಿ ರಾಮಕೃಷ್ಣ ಮಿಷನ್ ಆಶ್ರಮ ಉತ್ತಮ ಕೆಲಸ ಮಾಡುತ್ತಿದೆ. ಇದಕ್ಕೆ ಅಗತ್ಯವಿರುವ ಸಹಕಾರ ನೀಡಲಾಗುವುದು’ ಎಂದರು.
‘ಸ್ವಾಮಿ ವಿವೇಕಾನಂದರ ದೂರದೃಷ್ಟಿಯ ವಿಚಾರಗಳನ್ನು ಅಳವಡಿಸಿಕೊಂಡ ರಾಜ್ಯ ಸರ್ಕಾರ, ಸಮಾಜದ ಕಟ್ಟಕಡೇ ವ್ಯಕ್ತಿಯನ್ನೂ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದೆ’ ಎಂದು ಹೇಳಿದರು.
ಮಾಜಿ ಶಾಸಕ ಡಿ.ಆರ್.ಪಾಟೀಲ, ‘ರಾಮಕೃಷ್ಣ ಆಶ್ರಮದ ಕಾರ್ಯ ಚಟುವಟಿಕೆಗಳು ಉತ್ತಮ ಸಮಾಜ ನಿರ್ಮಿಸುವ ಗುರಿ ಹೊಂದಿವೆ. ಈ ಆಶ್ರಮಕ್ಕೆ ಬೆನ್ನೆಲುಬಾಗಿ ನಿಂತ ಗೌತಮಾನಂದಜಿ ಮಹಾರಾಜರ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ’ ಎಂದರು.
ರಾಮಕೃಷ್ಣ ಮಿಷನ್ ಆಶ್ರಮದ ಪರಮಾಧ್ಯಕ್ಷ ಗೌತಮಾನಂದಜಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.
ಮೈಸೂರಿನ ರಾಮಕೃಷ್ಣ ಮಿಷನ್ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಮಹಾರಾಜರು,
ನಿವೃತ್ತ ಪೊಲೀಸ್ ಅಧಿಕಾರಿ ವಿ.ವಿ.ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.