
ಗೋರಖಪುರ: ಸನಾತನ ಧರ್ಮದಂತಹ ಹಬ್ಬಗಳ ಶ್ರೀಮಂತ ಪರಂಪರೆ ಬೇರೆ ಯಾವುದೇ ದೇಶ ಹಾಗೂ ಧರ್ಮದಲ್ಲಿ ಇಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು (ಶುಕ್ರವಾರ) ಹೋಳಿ ಹಬ್ಬದ ಸಂದರ್ಭದಲ್ಲಿ ಹೇಳಿದ್ದಾರೆ.
ಗೋರಖಪುರದಲ್ಲಿ ಸಾಂಪ್ರದಾಯಿಕ ‘ನರಸಿಂಹ ಶೋಭಾಯಾತ್ರೆ’ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೋಳಿ ಹಬ್ಬವು ಏಕತೆಯ ಮೂಲಕ ‘ಅಖಂಡ’ ರಾಷ್ಟ್ರವನ್ನು ಉಳಿಸಿಕೊಳ್ಳುವ ಸಂದೇಶವನ್ನು ಸಾರುತ್ತದೆ. ‘ಏಕ ಭಾರತ’, ‘ಶ್ರೇಷ್ಠ ಭಾರತ’ದ ದೂರದೃಷ್ಟಿಯನ್ನು ಈಡೇರಿಸುತ್ತದೆ ಎಂದು ಹೇಳಿದ್ದಾರೆ.
ಸನಾತನ ಧರ್ಮದಲ್ಲಿರುವಂತಹ ಶ್ರೀಮಂತ ಹಬ್ಬಗಳ ಪರಂಪರೆ ಜಗತ್ತಿನ ಬೇರೆ ಯಾವುದೇ ದೇಶ, ಜಾತಿ ಅಥವಾ ಧರ್ಮದಲ್ಲಿಲ್ಲ. ನಮಗೆ ಸನಾತನ ಧರ್ಮದಲ್ಲಿ ನಂಬಿಕೆಯಿದೆ. ಆ ನಂಬಿಕೆಯೇ ಹಬ್ಬಗಳ ಆತ್ಮ. ಭಾರತ ಹಬ್ಬಗಳ ಮೂಲಕ ಮುನ್ನಡೆಯುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಸನಾತನ ಧರ್ಮವನ್ನು ವಿರೋಧಿಸುವವರು ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಸನಾತನ ಧರ್ಮ ಹಾಗೂ ಭಾರತದ ಸಾಮರ್ಥ್ಯವನ್ನು ಕಂಡಿದ್ದಾರೆ. ಸಂಗಮದಲ್ಲಿ ನಡೆದ ಬೃಹತ್ ಸ್ನಾನದ ಆಚರಣೆಯಲ್ಲಿ 66 ಕೋಟಿಗೂ ಅಧಿಕ ಭಕ್ತರು ಪಾಲ್ಗೊಂಡು ಆಶೀರ್ವಾದ ಪಡೆದುಕೊಂಡಿದ್ದಾರೆ. ಅಲ್ಲಿ ಜಾತಿ ಅಥವಾ ಧರ್ಮದ ಆಧಾರದಲ್ಲಿ ಯಾವುದೇ ಬೇಧಭಾವ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
ಗೋರಖನಾಥ ದೇಗುಲದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಆಚರಣೆ
ಗೋರಖಪುರ: ಉತ್ತರ ಪ್ರದೇಶ ಮುಖ್ಯಮಂತ್ರಿ, ಗೋರಖ
ಪೀಠಾಧೀಶ್ವರ ಯೋಗಿ ಆದಿತ್ಯನಾಥ್ ಅವರು ಶುಕ್ರವಾರ ಗೋರಖನಾಥ ದೇಗುಲದಲ್ಲಿ ಹೋಳಿ ಆಚರಿಸಿದರು ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಗೋರಖನಾಥ ದೇಗುಲದ ಮೇಳ ಮೈದಾನಕ್ಕೆ ಭೇಟಿ ನೀಡಿದ ಅವರು, ಅಲ್ಲಿ ಹೋಳಿಕವನ್ನು ಸುಟ್ಟರಲ್ಲದೆ, ವೈದಿಕ ಮಂತ್ರ ಪಠಿಸಿ ಭಸ್ಮಕ್ಕೆ ಪೂಜೆ ಸಲ್ಲಿಸಿ, ಆರತಿ ನೆರವೇರಿಸಿದರು. ಈ ಆಚರಣೆ ಬಳಿಕ ಸ್ವಾಮಿಗಳು ಹಾಗೂ ಭಕ್ತರು ಯೋಗಿ ಅದಿತ್ಯನಾಥ್ ಅವರ ಹಣೆಗೆ ಭಸ್ಮ ಹಚ್ಚಿ ಆಶೀರ್ವಾದ ಪಡೆದರು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಹೋಳಿಕ ದಹನದ ಸ್ಥಳದಿಂದ ಆದಿತ್ಯನಾಥ್ ಅವರು ಶ್ರೀನಾಥ್‌ಜಿ ದೇಗುಲಕ್ಕೆ ಭೇಟಿ ನೀಡಿದರು. ಅಲ್ಲಿ ಭಕ್ತಾಧಿಗಳಿಗೆ ಭಸ್ಮ ವಿತರಿಸಿದರು. ಶ್ರೀನಾಥ್‌ಜಿ ದೇವಾಲಯದ ವೇದಿಕೆಯಲ್ಲಿ ಆಯೋಜಿಸಲಾದ ಗಾಯನ ಕಾರ್ಯಕ್ರಮವನ್ನು ಅವರು ಆನಂದಿಸಿದರು ಎಂದು ಅದು ಹೇಳಿದೆ.
ಬಳಿಕ ದೇಗುಲದ ಗೋಶಾಲೆಗೆ ಭೇಟಿ ನೀಡಿ, ಅವುಗಳಿಗೆ ಭಸ್ಮ ಹಾಗೂ ಬಣ್ಣ ಹಚ್ಚಿದರು. ಅವುಗಳಿಗೆ ಬೆಲ್ಲ ತಿನ್ನಿಸಿದರು. ಸ್ಥಳದಲ್ಲಿ ಓಡಾಡುತ್ತಿದ್ದ ನವಿಲು ಹಾಗೂ ಬಾತುಕೋಳಿಗಳಿಗೆ ಧಾನ್ಯಗಳನ್ನು ಹಾಕಿದರು ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.