ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿರುವ ರಾಜ್ಯ ಸರ್ಕಾರ ಹಣ ಉಳಿತಾಯ ಮಾಡಲು ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿರುವುದನ್ನು ಪತ್ತೆ ಹಚ್ಚಲು ಮುಂದಾಗಿದೆ. ಶೀಘ್ರವೇ ಅನರ್ಹರು ಹಾಗೂ ಅಕ್ರಮವಾಗಿ ಪಡೆದಿರುವ ಬಿಪಿಎಲ್ ಕಾರ್ಡ್ ಅನ್ನು ರದ್ದುಗೊಳಿಸಲು ಪರಿಶೀಲನೆ ಕಾರ್ಯ ಆರಂಭಿಸಲು ಸರ್ಕಾರ ಮುಂದಾಗಲಿದೆ ಎಂದು ವರದಿಯಾಗಿದೆ.

ಬಿಪಿಎಲ್ ಕಾರ್ಡಿಗೆ (BPL Card) ಕೆಲವೊಂದು ಷರತ್ತು ಹಾಕುವ ಮೂಲಕ ಹಣ ಉಳಿತಾಯಕ್ಕೆ ಮುಂದಾಗಿರುವ ಸರ್ಕಾರ ಅಕ್ಟೋಬರ್ ಹೊತ್ತಿಗೆ ಆಪರೇಷನ್ ಬಿಪಿಎಲ್ ಕಾರ್ಡ್‌ಗೆ ಚಾಲನೆ ನೀಡಲಿದೆ ಎಂದು ಹೇಳಲಾಗಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗಿದೆ.

ಬಿಪಿಎಲ್ ಕಾರ್ಡ್‌ಗಳ ಪರಿಶೀಲನೆ ನಡೆದರೆ ಅನರ್ಹ ಫಲಾನುಭವಿಗಳು ಪತ್ತೆಯಾಗುತ್ತಾರೆ. ರಾಜ್ಯದಲ್ಲಿ 14 ಲಕ್ಷಕ್ಕೂ ಹೆಚ್ಚು ಅಕ್ರಮ ಬಿಪಿಎಲ್ ಕಾರ್ಡ್ ಇದೆ ಎನ್ನಲಾಗುತ್ತಿದ್ದು, ಅದನ್ನು ಪತ್ತೆ ಹಚ್ಚಲು ಸರ್ಕಾರ ಮುಂದಾಗಿದೆ. ಅನರ್ಹ, ಅಕ್ರಮ ಫಲಾನುಭವಿಗಳನ್ನು ಪತ್ತೆ ಹಚ್ಚಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಾಲ್ಕು ಬೇರೆ ಇಲಾಖೆಗಳ ಸಹಕಾರ ಪಡೆಯಲು ಮುಂದಾಗಿದೆ. ಬಿಪಿಎಲ್ ಕಾರ್ಡ್‌ಗಳ ಪರಿಶೀಲನೆ ನಡೆದರೆ ಅನರ್ಹ ಫಲಾನುಭವಿಗಳು ಪತ್ತೆಯಾಗಿ ಅವರು ಗ್ಯಾರಂಟಿ ಯೋಜನೆಗಳಿಂದ ಹೊರಗುಳಿಯಬೇಕಾಗುತ್ತದೆ ಎನ್ನುವುದು ಸರ್ಕಾರದ ಲೆಕ್ಕಾಚಾರವಾಗಿದೆ.
ನಿಗದಿಗಿಂತ ಹೆಚ್ಚು ಜಮೀನು ಹೊಂದಿದ್ದರೆ, ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿದಲ್ಲಿ, ವೈಟ್ ಬೋರ್ಡ್‌ 4 ಚಕ್ರದ ವಾಹನ ಇದ್ದು ಬಿಪಿಎಲ್‌ ಕಾರ್ಡ್‌ ಮಾಡಿಸಿದವರ ಕಾರ್ಡ್‌ ರದ್ದಾಗಲಿದೆ, ಇದಲ್ಲದೆ ಇನ್ನೂ ಕೆಲವು ಶರತ್ತುಗಳಿವೆ ಎಂದು ಹೇಳಲಾಗುತ್ತಿದೆ.