ಧಾರವಾಡ: ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದರು. ಮೂರು ವರ್ಷಗಳಿಂದ ಅವರ ಸುಳಿವು ಇರಲಿಲ್ಲ. ಇದೀಗ ಅವರ ಅಸ್ಥಿಪಂಜರ ಪತ್ತೆಯಾಗಿದೆ. ಇದು ಭಾರಿ ಅಚ್ಚರಿಗೆ ಕಾರಣವಾಗಿದೆ.
ಧಾರವಾಡದ ಮಾಳಮಡ್ಡಿ ಬಡಾವಣೆಯ ಕೆನರಾ ಬ್ಯಾಂಕ್ ಬಳಿ ಘಟನೆ ಬೆಳಕಿಗೆ ಬಂದಿದೆ. ಚಂದ್ರಶೇಖರ ಎಂಬುವವರು ಮೂರು ವರ್ಷಗಳಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ಒಬ್ಬರು ದೂರು ಕೊಟ್ಟಿದ್ದರು. ಚಂದ್ರಶೇಖರ್ ಅವರನ್ನು ಎಲ್ಲ ಕಡೆ ಹುಡುಕಾಡಿದ್ದ ಪೊಲೀಸರು, ಅವರ ಮನೆಗೆ ಹೋಗಿದ್ದರು. ಅಲ್ಲಿ ಹೋದಾಗ ಪೊಲೀಸರಿಗೆ ಅಚ್ಚರಿಯಾಗುವಂತೆ ಚಂದ್ರಶೇಖರ ಅಸ್ಥಿಪಂಜರ ಮನೆಯಲ್ಲೇ ಪತ್ತೆಯಾಗಿದೆ.
ಚಂದ್ರಶೇಖರ ತಮ್ಮ ಪತ್ನಿಯ ಸಾವಿನ ನಂತರ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ನಂತರ ಕೋವಿಡ್ ಬಂದಿತ್ತು. ಕೋವಿಡ್ ವೇಳೆಯೇ ಇವರು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೃತ ವ್ಯಕ್ತಿಯ ಸಂಬಂಧಿಕರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಇರುವ ಬಗ್ಗೆ ಮಾಹಿತಿ ಇದೆ. ಯಾರೂ ಇವರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿರಲಿಲ್ಲ.
ಇವರು ಹಾಲು, ಪೇಪರ್ ಹಾಕಿಸಿಕೊಳ್ಳುತ್ತಿರಲಿಲ್ಲ. ಇದರಿಂದ ಈ ವ್ಯಕ್ತಿ ಸತ್ತದ್ದು ಯಾರ ಗಮನಕ್ಕೂ ಬಂದಿಲ್ಲ. ಸುತ್ತಮುತ್ತ ಮನೆಗಳಿದ್ದರೂ ಯಾರಿಗೂ ಗೊತ್ತಾಗಿಲ್ಲ ಎಂಬುದು ವಿಚಿತ್ರ. ಸದ್ಯ ಅಸ್ಥಿಪಂಜರವನ್ನು ವಶಕ್ಕೆ ಪಡೆದ ಪೊಲೀಸರು, ಇದು ಅವರದೇನಾ ಎಂದು ತಿಳಿಯಲು ವಿಧಿವಿಜ್ಞಾನ ತಪಾಸಣೆಗೆ ಕಳಿಸಿದ್ದಾರೆ.