Join The Telegram | Join The WhatsApp |
ನವದೆಹಲಿ-
ಹಿಜಾಬ್ ನಿಷೇಧ ವಿವಾದಲ್ಲಿ ವಿಭಜಿತ ತೀರ್ಪು ನೀಡಿದ ನಂತರ ಈ ವಿಷಯ ವಿಚಾರಣೆಗೆ ಮೂರು ನ್ಯಾಯಾಧೀಶರ ತ್ರಿಸದಸ್ಯ ಪೀಠವನ್ನು ರಚಿಸಲು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಕಳೆದ ವರ್ಷ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದೆಲ್ಲೆಡೆ ಸದ್ದು ಮಾಡಿದ ವಿಷಯ ಹಿಜಾಬ್ ಬ್ಯಾನ್. ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ವಿಚಾರಣೆ ಸುಪ್ರೀಂ ಕೋರ್ಟ್ ಮೇಟ್ಟಿಲೇರಿ ವಿಚಾರಣೆ ನಡೆಯುತ್ತಿದೆ.
ಹಿಜಾಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಈ ಹಿಂದೆ ವಿಭಜಿತ ತೀರ್ಪು ನೀಡಿತ್ತು. ತರಗತಿ ಕೊಠಡಿಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿರ್ಬಂಧಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಬೆಂಬಲಿಸುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಎತ್ತಿಹಿಡಿದ್ದರು. ಆದರೆ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಹಿಜಾಬ್ ನಿಷೇಧವನ್ನು ಒಪ್ಪದೆ ವಿಭಜಿತ ತೀರ್ಪು ನೀಡಿದ್ದರು. ಈ ತೀರ್ಪಿನ ಮೇಲೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಫೆಬ್ರವರಿ 6 ರಿಂದ ರಾಜ್ಯದಲ್ಲಿ ಕೆಲವು ತರಗತಿಗಳಿಗೆ ನಿಗದಿಯಾಗಿರುವ ಪ್ರಾಯೋಗಿಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಮಧ್ಯಂತರ ಆದೇಶದ ಅಗತ್ಯವಿದೆ ಎಂದು ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ಮನವಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿರುವ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ವಿ ರಾಮಸುಬ್ರಮಣಿಯನ್ ಮತ್ತು ಜೆಬಿ ಪಾರ್ದಿವಾಲಾ ಅವರನ್ನೊಳಗೊಂಡ ಪೀಠವು ತ್ರಿಸದಸ್ಯ ಪೀಠ ರಚನೆಗೆ ಪರಿಗಣಿಸುವುದಾಗಿ ತಿಳಿಸಿದೆ.
‘ವಿದ್ಯಾರ್ಥಿನಿಯರಿಗೆ ಫೆಬ್ರವರಿ 6, 2023 ರಿಂದ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗುತ್ತವೆ. ಈ ಪ್ರಾಯೋಗಿಕ ಪರೀಕ್ಷೆಗಳು ಸರ್ಕಾರಿ ಶಾಲೆಗಳಲ್ಲಿ ನಡೆಯಲಿವೆ. ಹೀಗಾಗಿ ಅವರು ಪರೀಕ್ಷೆಗೆ ಹಾಜರಾಗಲು ಈ ಹಿಜಾಬ್ ವಿಷಯದಲ್ಲಿ ಮಧ್ಯಂತರ ನಿರ್ದೇಶನ ನೀಡಬೇಕು’ ಎಂದು ಹಿರಿಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
Join The Telegram | Join The WhatsApp |