
ನವದೆಹಲಿ: ಮೊದಲ ಮದುವೆಯು ಕಾನೂನಿನ
ಪ್ರಕಾರ ಚಾಲ್ತಿಯಲ್ಲಿ ಇದ್ದರೂ, ಎರಡನೆಯ ಪತಿಯಿಂದ ಜೀವನಾಂಶ ಕೇಳುವ ಹಕ್ಕು ಮಹಿಳೆಗೆ ಅಪರಾಧ ದಂಡಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 125ರ ಅಡಿಯಲ್ಲಿ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮ ಅವರು ಇರುವ ವಿಭಾಗೀಯ ಪೀಠವು, ಸೆಕ್ಷನ್ 125ರ ಅಡಿಯಲ್ಲಿ ಸಿಗುವ ಜೀವನಾಂಶವು ಮಹಿಳೆ ಪಡೆದುಕೊಳ್ಳುವ ಸೌಲಭ್ಯವಲ್ಲ; ಅದು ಪತಿಯ ಪಾಲಿನ ಕರ್ತವ್ಯ ಎಂದು ಹೇಳಿದೆ.
ಮಹಿಳೆ ಮತ್ತು ಪ್ರತಿವಾದಿ ಪುರುಷ ವಿವಾಹಿತರಂತೆ ಇದ್ದರು, ಇಬ್ಬರೂ ಒಟ್ಟಾಗಿ ಮಗುವನ್ನು ಸಲಹುತ್ತಿದ್ದರು. ಹೀಗಾಗಿ, ಜೀವನಾಂಶದ ಪ್ರಯೋಜನವು ಮಹಿಳೆಗೂ ಸಿಗಬೇಕು ಎಂದು ಆಕೆಯ ಪರ ವಕೀಲರು ವಾದಿಸಿದ್ದರು. ಮಹಿಳೆಗೆ ಮೊದಲೇ ಒಂದು ಮದುವೆ ಆಗಿದೆ ಎಂಬುದನ್ನು ಎರಡನೆಯ ಪತಿಯಿಂದ ಮುಚ್ಚಿಟ್ಟಿರಲಿಲ್ಲ ಎಂದು ತಿಳಿಸಿದ್ದರು.
ಮೊದಲ ಮದುವೆಯು ಊರ್ಜಿತದಲ್ಲಿ ಇದ್ದಾಗ, ಆಕೆಯ ತನ್ನ ಕಕ್ಷಿದಾರನ ಪತ್ನಿ ಎಂದು ಪರಿಗಣಿತಳಾಗುವುದಿಲ್ಲ. ಹೀಗಾಗಿ ಆಕೆಯು ಸೆಕ್ಷನ್ 125 ಅಡಿಯಲ್ಲಿ ಜೀವನಾಂಶ ಕೇಳಲು ಅವಕಾಶವಿಲ್ಲ ಎಂದು ಪುರುಷನ (ಎರಡನೆಯ ಪತಿ) ಪರ ವಕೀಲರು ವಾದಿಸಿದ್ದರು.