ಇವಿಎಂ ಮತಯಂತ್ರಗಳ ವಿರುದ್ಧದ ಕಾಂಗ್ರೆಸ್ ಮತ್ತು ಅದರ ಮಿತ್ರಬಳಗದವರ ಹೋರಾಟಕ್ಕೆ ಮತ್ತೆ ಭಾರೀ ಹಿನ್ನಡೆಯಾಗಿದೆ . ಮತ್ತೆ ಹಳೆಯ ಓಬೀರಾಯನ ಕಾಲದ ಬ್ಯಾಲೆಟ್ ಪೇಪರ ಪದ್ಧತಿಯನ್ನೇ ತರಬೇಕೆಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್ ಕೂಟದ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಪ್ರಶಾಂತ ಭೂಷಣ ಅವರನ್ನು ನ್ಯಾಯಾಲಯ ಅತ್ಯಂತ ಕಟುವಾಗಿ ತರಾಟೆಗೆ ತೆಗೆದುಕೊಂಡಿದೆ. ಹಿಂದಿನ ಬ್ಯಾಲೆಟ್ ಪೇಪರ ಕಾಲದಲ್ಲಿ ಏನೇನಾಗಿದೆ ಎನ್ನುವುದನ್ನು ನೀವು ಮರೆತಿರಬಹುದು, ಆದರೆ ನಾವು ಮರೆತಿಲ್ಲ ಎಂದ ನ್ಯಾಯಾಧೀಶರು ಭಾರತವನ್ನು ಬೇರೆ ದೇಶಗಳಿಗೆ ಹೋಲಿಸಬೇಡಿ, ಬಾರತ ಬಹುದೊಡ್ಡ ಪ್ರಜಾಸತ್ತಾತ್ಮಕ ದೇಶ. ಇಲ್ಲಿ ೯೮ ಕೋಟಿ ಮತದಾರರಿದ್ದಾರೆಂಬುದನ್ನು ಮರೆಯಬೇಡಿ. ಇರುವ ಈಗಿನ ವ್ಯವಸ್ಥೆಯನ್ನು ಹಾಳುಗೆಡಹಲು ಪ್ರಯತ್ನಿಸಬೇಡಿ” ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಅವರ ಬಳಗಕ್ಕೆ ಕಿಂಚಿತ್ತಾದರೂ ಮಾನ ಮರ್ಯಾದೆ ಇದ್ದರೆ ಅವರು ಇನ್ನಾದರೂ ಇಂತಹ ಉಪದ್ವ್ಯಾಪಗಳಿಂದ ದೂರವಿರಬೇಕು. ಇದು ೧೨/೧೬ ನೇ ಶತಮಾನ ಅಲ್ಲ. ಅತ್ಯಾಧುನಿಕವಾದ ೨೧ ನೇ ಶತಮಾನ. ಡಿಜಿಟಲ್ ಯುಗ. ಈಗಲೂ ಆ ಹಳೆಯ ಕಾಗದದ ಮತಪತ್ರ ಮಾಡಬೇಕೆನ್ನುವವರು ಯಾವ ಶತಮಾನದಲ್ಲಿದ್ದಾರೋ ಗೊತ್ತಿಲ್ಲ. ಕೋಟಿ ಕೋಟಿ ಮತಗಳನ್ನು ಕ್ಷಣಾರ್ಧದಲ್ಲಿ ಎಣಿಸುವ ಇವಿಎಂ ಯಂತ್ರಗಳನ್ನೇ ಬೇಡವೆನ್ನುವ ಈ ಜನ ಈಗಿನ ಕಾಲದಲ್ಲಿ ಬದುಕಲಿಕ್ಕೇ ಯೋಗ್ಯರಲ್ಲ ಎನ್ನಬೇಕಾಗುತ್ತದೆ. ಅಷ್ಟೆಲ್ಲ ಆಕ್ಷೇಪಣೆ ಇರುವವರು ಇವಿಎಂ ಯಂತ್ರದಲ್ಲಿ ಅಕ್ರಮ ಎಸಗಲಾಗುತ್ತದೆನ್ನುವ ಆರೋಪವನ್ನು ಏಕೆ ಈತನಕ ಸಿದ್ಧಪಡಿಸಲು ಸಾಧ್ಯವಾಗಿಲ್ಲ? ನ್ಯಾಯಾಲಯ ಈ ಮೊದಲೇ ಇವಿಎಂ ವಿರೋಧಿಗಳಿಗೆ ಅನೇಕ ಸಲ ಅಂತಹ ಅವಕಾಶ ಕಲ್ಪಿಸಿತ್ತು. ಮುಖ ಅಡಿಯಾಗಿ ಬಿದ್ದರೂ ಮೂಗು ಮೇಲಕ್ಕೇ ಇತ್ತು ಎನ್ನುವ ಮೂರ್ಖರಂತೆ ಮತ್ತೆ ಮತ್ತೆ ಈ ವಿಷಯವನ್ನು ಎತ್ತಿಕೊಂಡು ಆಕ್ಷೇಪಿಸುವವರ ತಲೆಯಲ್ಲಿ ಮಿದುಳಿನ ಬದಲು ಇನ್ನೇನು ತುಂಬಿದೆ ಎಂದು ಯೋಚಿಸಬೇಕಾಗಿದೆ. ನ್ಯಾಯಾಲಯ ಈ ಮೊದಲೂ ಅವರ ಆರೋಪವನ್ನು ತಳ್ಳಿಹಾಕಿತ್ತು. ಆದರೂ ಕೆಲಸವಿಲ್ಲದವ ಮಗುವಿನ ಕುಂಡೆ ಕೆತ್ತಿದ ಎನ್ನುವಂತೆ ತಿರುಗಿ ಕೋರ್ಟ್ ಬಾಗಿಲು ತಟ್ಟುವುದು ಹಾಸ್ಯಾಸ್ಪದವೇ ಸರಿ. ಇಂಥವರಿಗೆಲ್ಲ ಯಾವಾಗ ಬುದ್ಧಿ ಬಂದೀತೋ ಅಥವಾ ಬರುವುದೇ ಇಲ್ಲವೋ ದೇವರೇ ಬಲ್ಲ.
– ಎಲ್. ಎಸ್. ಶಾಸ್ತ್ರಿ