ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಎಂಜಿನಿಯರಿಂಗ್, ಎಂಬಿಎ ಪದವೀಧರರಾಗಿದ್ದು, ಉದ್ಯಮ ಕ್ಷೇತ್ರದಿಂದ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ (35) ಅವರು 1989 ಮಾರ್ಚ್ 31 ರಂದು ಜನಿಸಿದ್ದು, ಅಮೆರಿಕಾದ ಇಂಡಿಯಾನಾ ಪರ್ಡ್‌ಯೂ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಪೂರೈಸಿದ್ದಾರೆ. ಸಿಂಗಾಪುರ ಯುನಿವರ್ಸಿಟಿಯಲ್ಲಿ ಎಂಬಿಎ ವ್ಯಾಸಂಗ ಮಾಡಿದ್ದು, ವಿದ್ಯಾಭ್ಯಾಸದ ಬಳಿಕ ಉದ್ಯಮದ ಕಡೆ ಆಸಕ್ತಿ ತೋರಿ ಹಲವು ಕಂಪನಿಗಳನ್ನು ಕಟ್ಟಿ ಬೆಳೆಸಿದ್ದಾರೆ. ಯುವ ಉದ್ಯಮಿಯಾಗಿ ಸಾವಿರಾರು ಜನರಿಗೆ ಉದ್ಯೋಗದಾತರೂ ಆಗಿದ್ದಾರೆ. ಅಜ್ಜ ಮಾಜಿ ಸಿಎಂ, ಕೇಂದ್ರದ ಮಾಜಿ ಸಚಿವ ಎಸ್.ಆ‌ರ್ .ಬೊಮ್ಮಾಯಿ, ಅಪ್ಪ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಬಳಿಕ ಮೂರನೇ ತಲೆಮಾರಿನ ಭರತ್‌ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಯುವ ಉದ್ಯಮಿ ಭರತ್ ಬೊಮ್ಮಾಯಿ :
ತಂದೆ ಬಸವರಾಜ ಬೊಮ್ಮಾಯಿ
ಅವರ ರಾಜಕೀಯ ವ್ಯವಹಾರಗಳಂದ ದೂರವೇ ಇದ್ದವರು ಭರತ್ ಬೊಮ್ಮಾಯಿ. ತಾವಾಯಿತು. ತಮ್ಮ ಉದ್ಯಮವಾಯಿತು.

2023 ರ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾವಿ ಕ್ಷೇತ್ರದಲ್ಲಿ ತಂದೆ ಪರ ಅಬ್ಬರದ ಪ್ರಚಾರ ನಡೆಸಿ, ಹೆಚ್ಚಿನ ಮತಗಳ ಅಂತರದಿಂದ ತಂದೆ ಗೆಲುವಿಗೆ ಶ್ರಮಿಸಿದ್ದರು. ಅಂದಿನಿಂದ ಸಕ್ರಿಯ ರಾಜಕಾರಣದತ್ತ ಹೆಜ್ಜೆ ಹಾಕಿದ್ದರು. 1989 ರ ಮಾರ್ಚ್ 31ರಂದು ಜನಿಸಿದ ಅವರು, ಸಿಂಗಾಪುರ ಹಾಗೂ ಯುಎಸ್ ಎದಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದ್ದಾರೆ. ಇನ್ನೋವೇಶನ್‌ನಲ್ಲಿ ಮಾಸ್ಟರ್ಸ್ ನಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಉದ್ಯಮ ಆರಂಭಕ್ಕೂ ಮುನ್ನ ಅನೇಕ ಕಂಪನಿಗಳಿಗೂ ಸಲಹೆಗಾರರಾಗಿದ್ದರು. ಇದೀಗ ತಂದೆ ಪ್ರತಿನಿಧಿಸಿದ್ದ ಶಿಗ್ಗಾವಿ ಕ್ಷೇತ್ರದಲ್ಲಿ ಕಮಲ ಅರಳಿಸುವ ಮಹತ್ವದ ಹೊಣೆಗಾರಿಕೆ ಅವರ ಮೇಲಿದೆ.