
ಹೆಬ್ರಿ : ಮಗಳಿಗೆ ಕ್ರಿಕೆಟ್ ಬಗ್ಗೆ ಆಸಕ್ತಿ ಇರಲಿಲ್ಲ. ಸ್ನೇಹಿತರು ಕರೆದರು ಎಂದು ಹೋಗಿ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾಳೆ. ಈ ರೀತಿ ಯಾವ ತಂದೆ-ತಾಯಿಗೂ ಆಗಬಾರದು ಎಂದು ಚಿನ್ಮಯಿ ಶೆಟ್ಟಿ ಅವರ ತಂದೆ ಕರುಣಾಕರ ಶೆಟ್ಟಿ ಕಣ್ಣೀರಿಟ್ಟರು.
ಹೆಬ್ರಿ ಇಂದಿರಾನಗರ ಮದಗಮನೆ ಶಾಂತ ಶೆಟ್ಟಿ ಮತ್ತು ಉಪ್ಪಿನಂಗಡಿ ಮೂಲದ ಕರುಣಾಕರ ಶೆಟ್ಟಿ ಹಲವು ವರ್ಷಗಳಿಂದ ಬೆಂಗಳೂರು ದೊಡ್ಡಕಲ್ಲಸಂದ್ರದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನೆಲಸಿದ್ದರು. ಚಿನ್ಮಯಿ ಶೆಟ್ಟಿ ಓದಿನ ಜತೆಗೆ ಯಕ್ಷಗಾನದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಳು. ಕನಕಪುರ ರಸ್ತೆಯ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದಳು.
ಮಧ್ಯಾಹ್ನ ಕರೆ ಮಾಡಿ ಸ್ನೇಹಿತರೊಂದಿಗೆ ವಿಧಾನಸೌಧದತ್ತ ಹೋಗುತ್ತಿರುವುದಾಗಿ ಹೇಳಿದ್ದಳು. ಸಂಜೆ 5.30ಕ್ಕೆ ವೈದ್ಯರು ಕರೆ ಮಾಡಿ ಸಾವಿನ ಸುದ್ದಿ ತಿಳಿಸಿದರು. ಇನ್ನಾದರೂ ಸರ್ಕಾರ ಯಾವುದೇ ಕಾರ್ಯಕ್ರಮ ಮಾಡುವಾಗ ಸಮರ್ಪಕವಾಗಿ ವ್ಯವಸ್ಥೆ ಮಾಡಬೇಕು. ಕಾಲ್ತುಳಿತದಲ್ಲಿ ಚಿಕ್ಕ ವಯಸ್ಸಿನವರೇ ಮೃತಪಟ್ಟಿದ್ದಾರೆ. ಗೆದ್ದ ಮರುದಿನವೇ ವಿಜಯೋತ್ಸವ ಆಚರಿಸುವಂತಹದು ಏನಿತ್ತು ಎಂದು ಪ್ರಶ್ನಿಸಿದರು.
ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಬಂಧುಗಳು ಗುರುವಾರ ಬನಶಂಕರಿಯ ಚಿತಾಗಾರದಲ್ಲಿ ಚಿನ್ಮಯಿ ಶೆಟ್ಟಿ ಅಂತ್ಯಕ್ರಿಯೆ ನೆರವೇರಿಸಿದರು.