ನಾಗ್ಪುರ: ‘ನೀವು ಪ್ರಧಾನಿಯಾಗುವುದಾದರೆ ನಾವು ನಿಮಗೆ ಬೆಂಬಲ ನೀಡುತ್ತೇವೆ’ ಎಂದು ರಾಜಕೀಯ ನಾಯಕರೊಬ್ಬರು ಲೋಕಸಭಾ ಚುನಾವಣೆ ವೇಳೆ ನನಗೆ ಭರವಸೆ ನೀಡಿದ್ದರು. ಆದರೆ, ಅವರ ಪ್ರಸ್ತಾಪವನ್ನು ನಾನು ತಿರಸ್ಕರಿಸಿದ್ದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
” ನನಗೆ ಒಂದು ಘಟನೆ ನೆನಪಿದೆ. ನಾನು ಯಾರನ್ನೂ ಹೆಸರಿಸುವುದಿಲ್ಲ. ಆ ವ್ಯಕ್ತಿ ನೀವು ಪ್ರಧಾನಿಯಾಗಲು ಬಯಸಿದರೆ ನಾವು ನಿಮ್ಮನ್ನು ಬೆಂಬಲಿಸುತ್ತೇವೆ” ಎಂದು ಹೇಳಿದರು. “ನೀವು ನನ್ನನ್ನು ಏಕೆ ಬೆಂಬಲಿಸಬೇಕು ಮತ್ತು ನಾನು ನಿಮ್ಮ ಬೆಂಬಲವನ್ನು ಏಕೆ ತೆಗೆದುಕೊಳ್ಳಬೇಕು ಎಂದು ನಾನು ಕೇಳಿದೆ. ಪ್ರಧಾನಿಯಾಗುವುದು ನನ್ನ ಜೀವನದ ಗುರಿಯಲ್ಲ. ನಾನು ನನ್ನ ನಂಬಿಕೆಗೆ ಮತ್ತು ನನ್ನ ಸಂಘಟನೆಗೆ ನಿಷ್ಠನಾಗಿದ್ದೇನೆ, ನಾನು ರಾಜಿ ಮಾಡಿಕೊಳ್ಳಲು ಹೋಗುವುದಿಲ್ಲ. ಅದು
ಯಾವುದೇ ಹುದ್ದೆಯಿರಲಿ.. ಏಕೆಂದರೆ ನನ್ನ ಬದ್ಧತೆಯೇ ನನಗೆ ಮುಖ್ಯ ಎಂದು ಗಡ್ಕರಿ ಹೇಳಿದರು.
ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಯಾವುದೇ ಹುದ್ದೆಗಾಗಿ ನಾನು ನನ್ನ ತತ್ವ ಸಿದ್ಧಾಂತ ಹಾಗೂ ಸಂಘಟನೆಯ ನಿಷ್ಠೆಯನ್ನು ರಾಜಿ ಮಾಡಿಕೊಳ್ಳುಲು ಹೋಗುವುದಿಲ್ಲ ಎಂದರು.ಸಚಿವ ನಿತಿನ್ ಗಡ್ಕರಿ ತಮ್ಮ ಭಾಷಣದಲ್ಲಿ ಪತ್ರಿಕೋದ್ಯಮ ಮತ್ತು ರಾಜಕೀಯ ಎರಡರಲ್ಲೂ ನೈತಿಕತೆಯ ಮಹತ್ವವನ್ನು ಒತ್ತಿ ಹೇಳಿದರು. ಈ ವೇಳೆ ಹಿರಿಯ ಸಿಪಿಐ ಪದಾಧಿಕಾರಿಯೊಂದಿಗಿನ ಸಭೆಯನ್ನು ನೆನಪಿಸಿಕೊಂಡ ನಿತಿನ್ ಗಡ್ಕರಿ, ನಾಗ್ಪುರ ಮತ್ತು ವಿದರ್ಭದ ಅತ್ಯಂತ ಎತ್ತರದ ರಾಜಕಾರಣಿಗಳಲ್ಲಿ ಒಬ್ಬರಾದ ದಿವಂಗತ ಎ ಬಿ ಬರ್ಧನ್ ಅವರ ಬಗ್ಗೆ ಮಾತನಾಡಿದರು.
ಎ.ಬಿ. ಬರ್ಧನ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿರೋಧಿಯಾಗಿದ್ದರು. ಆದರೆ ಅವರ ಪ್ರಾಮಾಣಿಕ ವಿರೋಧವನ್ನು ಗೌರವಿಸಬೇಕು ಎಂದು ಹೇಳಿದರು. “ಪ್ರಾಮಾಣಿಕತೆಯಿಂದ ವಿರೋಧಿಸುವ ವ್ಯಕ್ತಿಯನ್ನು ಗೌರವಿಸಬೇಕು ಎಂದು ನಾನು ಹೇಳಿದ್ದೇನೆ, ಏಕೆಂದರೆ ಅವರ ವಿರೋಧದಲ್ಲಿ ಪ್ರಾಮಾಣಿಕತೆ ಇರುತ್ತದೆ … ಅಪ್ರಾಮಾಣಿಕತೆಯಿಂದ ವಿರೋಧಿಸುವವನು ಯಾವುದೇ ಗೌರವಕ್ಕೆ ಅರ್ಹನಲ್ಲ” ಎಂದು ನಿತಿನ್ ಗಡ್ಕರಿ ಹೇಳಿದರು. ಬರ್ಧನ್ ತಮ್ಮ ಸಿದ್ಧಾಂತಕ್ಕೆ ನಿಷ್ಠರಾಗಿದ್ದರು. ಈಗ ರಾಜಕೀಯ ಮತ್ತು ಪತ್ರಿಕೋದ್ಯಮದಲ್ಲಿ ಅಂತಹ ಜನರ ಕೊರತೆಯಿದೆ ಎಂದು ಅವರು ಹೇಳಿದರು.
ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಮಾಧ್ಯಮ – ಎಲ್ಲಾ ನಾಲ್ಕು ಆಧಾರ ಸ್ತಂಭಗಳು ನೈತಿಕತೆಯನ್ನು ಅನುಸರಿಸಿದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು ಬಿಜೆಪಿ ನಾಯಕ ಹೇಳಿದರು.