ಬೆಳಗಾವಿ : ಅನಗೋಳ ಧರ್ಮವೀರ ಸಂಭಾಜಿ ವೃತದಲ್ಲಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ವಿಷಯ ಈಗ ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ ಪಾಟೀಲ ಹಾಗೂ ಶ್ರೀರಾಮ ಸೇನೆ ಹಿಂದುಸ್ತಾನ್ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ್ ಬೆಂಬಲಿಗರ ನಡುವೆ ವಿವಾದಕ್ಕೆ ಕಾರಣವಾಗಿದೆ.
ಸುಮಾರು 21 ಅಡಿ ಎತ್ತರದ ಪ್ರತಿಮೆಯನ್ನು ಜನವರಿ 5 ರಂದು ಅನಾವರಣ ಮಾಡುವ ಬಗ್ಗೆ ಮಹಾನಗರ ಪಾಲಿಕೆ ಮೇಯರ್ ಸವಿತಾ ಕಾಂಬಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಗುರುವಾರ ಪ್ರತಿಮೆ ಅನಾವರಣಕ್ಕೆಮೇಯರ್ ಸವಿತಾ ಕಾಂಬಳೆ, ಉಪ ಮೇಯರ್ ಆನಂದ ಚವಾಣ ಆಗಮಿಸಿದ್ದಾರೆ. ಆ ಸಂದರ್ಭದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಅವರಿಗೆ ಪ್ರತಿರೋಧ ಒಡ್ಡಿದ್ದಾರೆ. ಕಾಮಗಾರಿ ಪೂರ್ಣವಾಗದೇ ಪ್ರತಿಮೆ ಅನಾವರಣ ಮಾಡಲು ಬಿಡುವುದಿಲ್ಲ ಎಂದು ಕಾರ್ಯಕರ್ತರು ಆಕ್ಷೇಪಿಸಿದರು.
ಮೇಯರ್ ಸವಿತಾ ಕಾಂಬಳೆ ಮಾತನಾಡಿ, ಈಗಾಗಲೇ ಸಭೆಯಲ್ಲಿ ತೀರ್ಮಾನಿಸಿದಂತೆ ಜ.5 ರಂದು ಪ್ರತಿಮೆ ಅನಾವರಣ ಮಾಡುತ್ತೇವೆ. ಈಗ ಪ್ರತಿಮೆಯ ಕೆಳಭಾಗದ ಸಭಾಭವನದಲ್ಲಿ ಪೂಜೆ ನೆರವೇರಿಸುತ್ತಿದ್ದು ಯಾರು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡಬಾರದು ಎಂದು ತಿಳಿಸಿದರು.
ಬಿಜೆಪಿ ಹಾಗೂ ಶ್ರೀರಾಮಸೇನೆಯ ಕಾರ್ಯಕರ್ತರು ವೃತ್ತದಲ್ಲಿ ಸೇರಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅಭಯ ಪಾಟೀಲ ಹಾಗೂ ಎಂಇಎಸ್ ಬೆಂಬಲಿತ ಅಭ್ಯರ್ಥಿಯಾಗಿ ರಮಾಕಾಂತ ಕೊಂಡೂಸ್ಕರ್ ಸೆಣಸಾಡಿ ಕೊನೆಗೆ ಅಭಯ ಪಾಟೀಲ ಜಯಭೇರಿ ಭಾರಿಸಿದ್ದು ಇತಿಹಾಸ.