ಸಾಗರ :
16 ವರ್ಷಗಳ ಕಾಲ ಊರಿನ ಸೇವೆ ಮಾಡಿದ ಶಿಕ್ಷಕರೊಬ್ಬರಿಗೆ ಗ್ರಾಮಸ್ಥರು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಳೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂತೋಷ್ ಕಾಂಚನ್ ಎಂಬ ಶಿಕ್ಷಕ 16 ವರ್ಷಗಳಿಂದ ಕಾರ್ಯನಿರ್ವಹಿಸಿದ್ದರು. ಅವರ ಈ ಸೇವೆಗಾಗಿ ಗ್ರಾಮಸ್ಥರು ಗುರುದಕ್ಷಿಣೆಯಾಗಿ ಬೈಕ್ ನೀಡಿದ್ದಾರೆ.
ಸಂತೋಷ್ ಅವರು ವಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರಾಗಿ ಬಂದಾಗ ಇಲ್ಲಿನ ಕಾಡು ಕುಣಬಿ ಜನಾಂಗದವರಿಗೆ ವಾಹನ ವ್ಯವಸ್ಥೆ ಇರಲಿಲ್ಲ. ಮುಖ್ಯರಸ್ತೆಗೆ ತಲುಪಬೇಕೆಂದರೆ 8 ಕಿಲೋ ಮೀಟರ್ ಕಾಲ್ನಡಿಗೆಯಲ್ಲೇ ಹೋಗಬೇಕಿತ್ತು. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಊರಿನವರಿಗಾಗಿ ಶಿಕ್ಷಕ ಸಂತೋಷ್ ಕಾಂಚನ್ ಬೈಕ್ ಅನ್ನು ಖರೀದಿಸಿದ್ದರು. ಗ್ರಾಮದ ಜನರಿಗೆ ಆರೋಗ್ಯ ಸಮಸ್ಯೆ ಬಂದರೆ ಈ ಶಿಕ್ಷಕನ ಬೈಕ್ ಆ್ಯಂಬುಲೆನ್ಸ್ ಆಗಿತ್ತು.
ತಮ್ಮ ಶಾಲೆಯ ವಿದ್ಯಾರ್ಥಿಗಳನ್ನು ಪ್ರತಿಭಾ ಕಾರಂಜಿಗೂ ಈ ಬೈಕ್ನಲ್ಲಿಯೇ ಕರೆದುಕೊಂಡು ಹೋಗುತ್ತಿದ್ದರು. ಇದೀಗ ಶಿಕ್ಷಕ ಸಂತೋಷ್ ಅವರಿಗೆ ಬೇರೆ ಊರಿನ ಶಾಲೆಗೆ ವರ್ಗವಣೆಯಾಗಿದೆ. ಸತತ 16 ವರ್ಷಗಳ ಕಾಲ ಶಿಕ್ಷಕರಾಗಿ
ಸೇವೆ ಸಲ್ಲಿಸಿದ್ದ ಕಾರಣಕ್ಕೆ ಊರವರು ಹಣ ಸಂಗ್ರಹಿಸಿ ಬಜಾಜ್ ಪಲ್ಸರ್ ಬೈಕ್ ನ್ನು ಗುರು ಕಾಣಿಕೆಯಾಗಿ ಸಮರ್ಪಿಸಿದ್ದಾರೆ.