ಚಿಕ್ಕಮಗಳೂರು :
ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೇ ಬಂದ ಯುವ ವಕೀಲನ ಮೇಲೆ ಇಲ್ಲಿಯ ಪೊಲೀಸರು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣದ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ ಪೂಜಾರಿ ಸೇರಿದಂತೆ ಆರು ಪೊಲೀಸರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

ವಕೀಲ ಪ್ರೀತಂ ಅವರು ಮಾರ್ಕೆಟ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಆಗ ಪೊಲೀಸರು ಅವರ ಬೈಕಿನಿಂದ ಕೀ ಕಸಿದುಕೊಂಡಿದ್ದಾರೆ. ಹೆಲ್ಮೆಟ್ ಹಾಕದಿರುವುದಕ್ಕೆ ದಂಡ ಕಟ್ಟುತ್ತೇನೆ. ಕೀ ಕಸಿದುಕೊಳ್ಳಲು ನಿಮಗೆ ಅಧಿಕಾರ ಕೊಟ್ಟಿರುವುದು ಯಾರು ಎಂದು ಪ್ರೀತಮ್ ಪ್ರಶ್ನಿಸಿ ವಿಡಿಯೋ ಮಾಡಿಕೊಂಡಿದ್ದಾರೆ.

ನಂತರ ಪೊಲೀಸರು ವಕೀಲ ಪ್ರೀತಂ ಅವರನ್ನು ಠಾಣೆಗೆ ಕರೆದೊಯ್ದು ದೊಣ್ಣೆ, ಲಾಠಿ, ಪೈಪ್ ನಿಂದ ಹಲ್ಲೆ ನಡೆಸಿ ತುಳಿದಿದ್ದಾರೆ ಎಂದು ಪ್ರೀತಂ ದೂರಿದ್ದಾರೆ.

ವಿಷಯ ತಿಳಿದ ಇತರ ವಕೀಲರು ಠಾಣೆಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ಪ್ರೀತಂ ಅವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಚಿಕಿತ್ಸೆ ನೀಡಲಾಯಿತು. ರಾತ್ರಿ ಇಡೀ ಠಾಣೆಯ ಎದುರು ಧರಣಿ ನಡೆಸಿದ ವಕೀಲರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನಿರತ ವಕೀಲರನ್ನು ಸಮಾಧಾನ ಪಡಿಸಲು ಪೊಲೀಸರು ಯತ್ನಿಸಿದರು. ಆದರೆ ವಕೀಲರು ಅದಕ್ಕೆ ಮಣಿಯಲಿಲ್ಲ. ಪೊಲೀಸರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಸಂಬಂಧ ತನಿಖೆ ನಡೆಸಿ ವರದಿ ನೀಡಲು ಡಿ ವೈ ಎಸ್ ಪಿ ಅವರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ತಿಳಿಸಿದ್ದಾರೆ.