ನವದೆಹಲಿ: ದೇಶವು ಈ ವರ್ಷ ಉತ್ತಮ ಮಾನ್ಸೂನ್ ನಿರೀಕ್ಷಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಐಎಂಡಿ (IMD) ಮುನ್ಸೂಚನೆ ಪ್ರಕಾರ, ದೇಶವು ಮುಂಬರುವ ಜೂನ್-ಸೆಪ್ಟೆಂಬರ್ ಮಾನ್ಸೂನ್ ಋತುವಿನಲ್ಲಿ ಸಾಮಾನ್ಯ ಮಳೆ (ಶೇಕಡಾ 100)ಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ.

ಈ ಋತುವಿನ ಮೊದಲ ದೀರ್ಘಾವಧಿಯ ಮುನ್ಸೂಚನೆಯಲ್ಲಿ, ಸಮಭಾಜಕ ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನಿನೋ ಸೇರಿದಂತೆ ಮಾನ್ಸೂನ್‌ನ ಎಲ್ಲಾ ಪ್ರಮುಖ ಅಂಶಗಳು ಅನುಕೂಲಕರವಾಗಿವೆ ಎಂದು ಐಎಂಡಿ ಹೇಳಿದೆ.

ಮಾನ್ಸೂನ್ ಋತುವು ದೀರ್ಘಾವಧಿಯ ಸರಾಸರಿಯ ಶೇಕಡಾ 105 ರಷ್ಟು ಮಳೆಯನ್ನು ತರುವ ಸಾಧ್ಯತೆಯಿದೆ ಎಂದು ಅದು ಹೇಳಿದೆ. ಈ ಋತುವಿನ ದೀರ್ಘಾವಧಿಯ ಸರಾಸರಿ ಮಳೆ 87 ಸೆಂ.ಮೀ. ಆಗಿದೆ. ಇದರರ್ಥ ಭಾರತವು ಈ ಋತುವಿನಲ್ಲಿ ನಾಲ್ಕು ತಿಂಗಳ ಸಂಪೂರ್ಣ ಋತುವಿನಲ್ಲಿ ಸರಾಸರಿ 91 ಸೆಂ.ಮೀಕ್ಕಿಂತ ಹೆಚ್ಚು ಮಳೆಯನ್ನು ಪಡೆಯಬಹುದು.

ಹಾಗಿದ್ದಲ್ಲಿ, ಕಳೆದ ಏಳು ವರ್ಷಗಳಲ್ಲಿ – 2019 ರಿಂದ – ಇದು ಐದನೇ ಬಾರಿಗೆ ದೇಶವು ಋತುವಿನಲ್ಲಿ 100 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚಿನ ಮಳೆಯನ್ನು ಪಡೆಯುತ್ತದೆ. ಇದು ಸತತ ಎರಡನೇ ವರ್ಷ ‘ಸಾಮಾನ್ಯಕ್ಕಿಂತ ಹೆಚ್ಚಿನ’ ಮಳೆಯಾಗಲಿದೆ. ಐಎಂಡಿಯು 96-104 ಪ್ರತಿಶತ ಮಳೆಯನ್ನು ‘ಸಾಮಾನ್ಯ’ ಮಳೆ ಎಂದು ವ್ಯಾಖ್ಯಾನಿಸುತ್ತದೆ, 104 ರಿಂದ 110 ಪ್ರತಿಶತದಷ್ಟು ಮಳೆಯನ್ನು ‘ಸಾಮಾನ್ಯಕ್ಕಿಂತ ಹೆಚ್ಚು’ ಎಂದು ಮತ್ತು ಅದಕ್ಕಿಂತ ಹೆಚ್ಚಿನದನ್ನು ‘ಅಧಿಕ’ ಎಂದು ವ್ಯಾಖ್ಯಾನಿಸುತ್ತದೆ. ಕಳೆದ ವರ್ಷ, 2024 ರಲ್ಲಿ, ಸಾಮಾನ್ಯ ಮಳೆಗಿಂತ ಹೆಚ್ಚು ಅಂದರೆ ಶೇಕಡಾ 108 ರಷ್ಟು ಮಳೆಯಾಗಿತ್ತು.

ಪೆಸಿಫಿಕ್ ಮಹಾಸಾಗರದಲ್ಲಿ ಎನ್ಸೊ (ENSO) ಸ್ಥಿತಿಯು ಕನಿಷ್ಠ ಮಾನ್ಸೂನ್ ಋತುವಿನ ಅಂತ್ಯದವರೆಗೆ ತಟಸ್ಥವಾಗಿರುತ್ತದೆ ಎಂದು ಎಲ್ಲಾ ಮಾದರಿಗಳು ತೋರಿಸುತ್ತಿವೆ. ಯುರೇಷಿಯಾ ಸೇರಿದಂತೆ ಉತ್ತರ ಗೋಳಾರ್ಧದಲ್ಲಿ ಚಳಿಗಾಲ ಮತ್ತು ವಸಂತಕಾಲದ ಹಿಮದ ಹೊದಿಕೆಯು ಸಾಮಾನ್ಯಕ್ಕಿಂತ ಕಡಿಮೆಯಾಗಿದೆ, ಇದು ಮಾನ್ಸೂನ್ ಮಳೆಯ ದೃಷ್ಟಿಕೋನದಿಂದ ಉತ್ತಮವಾಗಿದೆ. ಮಾನ್ಸೂನ್ ಮಳೆಯು ಈ ಪ್ರದೇಶದ ಮೇಲೆ ಹಿಮದ ಹೊದಿಕೆಯ ವ್ಯಾಪ್ತಿಗೆ ವಿಲೋಮವಾಗಿ ಸಂಬಂಧಿಸಿದೆ. “ಆದ್ದರಿಂದ, ಮುಂಬರುವ ಋತುವಿನಲ್ಲಿ ಭಾರತದಲ್ಲಿ ಉತ್ತಮ ಮಳೆಯಾಗಲು ಪರಿಸ್ಥಿತಿಗಳು ಅನುಕೂಲಕರವಾಗಿವೆ ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರವಿಚಂದ್ರನ್ ಮುನ್ಸೂಚನೆಯನ್ನು ಬಿಡುಗಡೆ ಮಾಡುವಾಗ ಹೇಳಿದ್ದಾರೆ.

ಭಾರತದ ವಾರ್ಷಿಕ ಮಳೆಯ ಸುಮಾರು ಶೇ. 75 ರಷ್ಟು ನಾಲ್ಕು ತಿಂಗಳ ಮಾನ್ಸೂನ್ ಋತುವಿನಲ್ಲಿ ಸುರಿಯುತ್ತದೆ. ಈ ಸಮಯದಲ್ಲಿ ಬೀಳುವ ಮಳೆಯು ನೀರಾವರಿ, ಕುಡಿಯುವ ನೀರು, ವಿದ್ಯುತ್ ಉತ್ಪಾದನೆ ಮತ್ತು ಒಟ್ಟಾರೆ ಆರ್ಥಿಕತೆಗೆ ಅತ್ಯಂತ ಮುಖ್ಯವಾಗಿದೆ.
ಏಪ್ರಿಲ್‌ನಲ್ಲಿ ಬಿದ್ದ ಮಳೆಯ ವರದಿಯ ನಂತರ ಮೇ ತಿಂಗಳಲ್ಲಿ ಇದನ್ನು ಮತ್ತೆ ನವೀಕರಣವನ್ನು ಮಾಡಲಾಗುತ್ತದೆ, ಈ ಅವಧಿಯಲ್ಲಿ ಐಎಂಡಿ ನಾಲ್ಕು ವಿಶಾಲ ಭೌಗೋಳಿಕ ಪ್ರದೇಶಗಳಿಗೆ ತನ್ನ ಮುನ್ಸೂಚನೆಗಳನ್ನು ಮತ್ತು ಋತುವಿನಲ್ಲಿ ಮಳೆಯ ನಿರೀಕ್ಷಿತ ಮಾಸಿಕ ವಿತರಣೆಯನ್ನು ಸಹ ಹಂಚಿಕೊಳ್ಳುತ್ತದೆ. ಕೇರಳ ಕರಾವಳಿಯಲ್ಲಿ ಮಾನ್ಸೂನ್ ಪ್ರಾರಂಭವಾಗುವ ಸಾಧ್ಯತೆಯ ದಿನಾಂಕವನ್ನು ಇದು ಘೋಷಿಸುತ್ತದೆ, ಸಾಮಾನ್ಯವಾಗಿ ಜೂನ್ 1, ಇದು ಮಳೆಗಾಲದ ಅಧಿಕೃತ ಆರಂಭವನ್ನು ಸೂಚಿಸುತ್ತದೆ.

ತಮಿಳುನಾಡು, ಬಿಹಾರ ಮತ್ತು ಜಾರ್ಖಂಡ್‌ನ ಕೆಲವು ಭಾಗಗಳು ಮತ್ತು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಬಹುತೇಕ ಇಡೀ ದೇಶದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹಂಚಿಕೊಂಡ ಮಾಹಿತಿಯು ತೋರಿಸಿದೆ. ಕರಾವಳಿ ಪೂರ್ವ ಮಹಾರಾಷ್ಟ್ರ, ದಕ್ಷಿಣ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಕೆಲವು ಭಾಗಗಳನ್ನು ಒಳಗೊಂಡಿರುವ ಮಧ್ಯ ಪರ್ಯಾಯ ದ್ವೀಪ ಪ್ರದೇಶವು ವಿಶೇಷವಾಗಿ ಸಮೃದ್ಧ ಮಳೆಯಾಗುವ ಸಾಧ್ಯತೆಯಿದೆ.