ಅಜ್ಮೇರ್ : ಇಲ್ಲಿನ ಪುಷ್ಕರ್ ಅಂತಾರಾಷ್ಟ್ರೀಯ ಜಾನುವಾರು ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಎಂಟು ವರ್ಷದ ಕೋಣ ಎಲ್ಲರ ಗಮನ ಸೆಳೆದಿದೆ. ಈ ಕೊಬ್ಬಿದ ಕೋಣದ ಹೆಸರು ಅನ್ಮೋಲ್. ಈ ಕೋಣದ ತೂಕ ಬರೋಬ್ಬರಿ 1500 ಕೆಜಿ…! ಅಂದರೆ 15 ಟನ್…!
ಹರಿಯಾಣದ ಸಿರ್ಸಾ ಜಿಲ್ಲೆಯ ಹಿಸ್ಸು ಗ್ರಾಮದ ನಿವಾಸಿ ಪಾಲ್ಮಿಂದ್ರ ಗಿಲ್ ಅವರು ಸಾಕಿರುವ ಈ ಕೋಣವು, ತನ್ನ ಬೃಹತ್ ಆಕಾರದಿಂದಲೇ ಸುತ್ತಲಿನ ಹಳ್ಳಿಗಳಲ್ಲಿ ಹೆಸರುವಾಸಿಯಾಗಿದೆ. ಇದರ ಬೆಲೆ ಬರೋಬ್ಬರಿ ₹ 23 ಕೋಟಿ ರೂ.ಗಳು. ಪುಷ್ಕರ್ ಮೇಳದಲ್ಲಿ ಇದನ್ನು ಖರೀದಿಸಲು ಜನರು ಪೈಪೋಟಿಗೆ ಇಳಿದಿದ್ದಾರೆ. ಇದಕ್ಕೆ 23 ಕೋಟಿ ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಆದರೆ, ಇದರ ಮಾಲೀಕರು ಮಾತ್ರ ಮಾರಾಟಕ್ಕೆ ಒಪ್ಪುತ್ತಿಲ್ಲ.
ಪುಷ್ಕರ್ ಮೇಳ ಮತ್ತು ಮೀರತ್‌ನಲ್ಲಿ ನಡೆದ ಅಖಿಲ ಭಾರತ ರೈತರ ಮೇಳದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಈ ಕೋಣ ಗಮನ ಸೆಳೆದಿದೆ. ಅದರ ಗಾತ್ರ ಹಾಗೂ ವಂಶಾವಳಿಗೆ ಹೆಸರುವಾಸಿಯಾದ ಅನ್ಮೋಲ್ ಕೋಣ ಸಾಮಾಜಿಕ ಮಾಧ್ಯಮದಲ್ಲಿಯೂ ಸಾಕಷ್ಟು ಸುದ್ದಿಯಲ್ಲಿದೆ.
ಅನ್ಮೋಲ್ ಐಷಾರಾಮಿ ಜೀವನಶೈಲಿಗೆ ಹೆಚ್ಚಿನ ವೆಚ್ಚವಾಗುತ್ತದೆ. ಅದರ ಮಾಲೀಕ ಪಾಲ್ಮಿಂದ್ರ ಗಿಲ್ ಎಂಬವರು ಎಮ್ಮೆಯ ಆಹಾರಕ್ಕಾಗಿ ಪ್ರತಿದಿನ ಸುಮಾರು ₹ 1,500 ಖರ್ಚು ಮಾಡುತ್ತಾರೆ. ಇದರಲ್ಲಿ ಒಣ ಹಣ್ಣುಗಳು ಮತ್ತು ಹೆಚ್ಚಿನ ಕ್ಯಾಲೋರಿ ಆಹಾರಗಳು ಸೇರಿವೆ. ಅಲ್ಲದೆ, ಅದರ ಆಹಾರದ ಮೆನುವಿನಲ್ಲಿ 250 ಗ್ರಾಂ ಬಾದಾಮಿ, 30 ಬಾಳೆಹಣ್ಣು, 4 ಕೆಜಿ ದಾಳಿಂಬೆ, 5 ಕೆಜಿ ಹಾಲು ಮತ್ತು 20 ಮೊಟ್ಟೆಗಳು ಸಹ ಸೇರಿವೆ. ಇದು ಎಣ್ಣೆ ಕೇಕ್, ಹಸಿರು ಮೇವು, ತುಪ್ಪ, ಸೋಯಾಬೀನ್ ಮತ್ತು ಕಾರ್ನ್ ಅನ್ನು ಸಹ ತಿನ್ನುತ್ತದೆ.
ದಿನನಿತ್ಯವೂ ಕೋಣ ಅನ್ಮೋಲ್ ಅನ್ನು ಅಂದಗೊಳಿಸಲಾಗುತ್ತದೆ. ಕೋಣಕ್ಕೆ ದಿನಕ್ಕೆರಡು ಬಾರಿ ಸ್ನಾನ ಮಾಡಿಸುತ್ತಾರೆ. ಬಾದಾಮಿ ಮತ್ತು ಸಾಸಿವೆ ಎಣ್ಣೆಯ ವಿಶೇಷ ಮಿಶ್ರಣವು ಅದರ ಚರ್ಮಕ್ಕೆ ಹೊಳಪು ನೀಡುತ್ತದೆ ಮತ್ತು ಆರೋಗ್ಯಕರವಾಗಿರಿಸುತ್ತದೆ.https://x.com/i/status/1856814277845233777
ಗಣನೀಯ ವೆಚ್ಚದ ಹೊರತಾಗಿಯೂ, ವೆಚ್ಚವನ್ನು ಸರಿದೂಗಿಸಲು ಹಿಂದೆ ಕೋಣದ ತಾಯಿ ಮತ್ತು ಸಹೋದರಿಯನ್ನು ಮಾರಾಟ ಮಾಡಿದ್ದರೂ ಸಹ, ಅನ್ಮೋಲ್‌ಗೆ ಉತ್ತಮ ಆರೈಕೆಗಾಗಿ ಗಿಲ್ ಎಲ್ಲವನ್ನೂ ಮಾಡುತ್ತಿದ್ದಾರೆ. ಅನ್ಮೋಲ್ ಕೋಣದ ತಾಯಿ ದಿನಕ್ಕೆ 25 ಲೀಟರ್ ಹಾಲು ನೀಡುತ್ತಿತ್ತು.
ಅನ್ಮೋಲ್ ಕೋಣದ ಬೃಹತ್ ಗಾತ್ರ, ಎತ್ತರ ಹಾಗೂ ಅದರ ನಿಲುವು ಮತ್ತು ಅದರ ಆಹಾರ ಎಲ್ಲವೂ ಗಮನ ಸೆಳೆಯುತ್ತದೆ. ವಾರಕ್ಕೆ ಎರಡು ಬಾರಿ ಸಂಗ್ರಹಿಸುವ ಅನ್ಮೋಲ್‌ನ ವೀರ್ಯಕ್ಕೆ ಹೆಚ್ಚಿನ ಬೇಡಿಕೆಯಿದೆ. ಪ್ರತಿ ಸಂಗ್ರಹಕ್ಕೆ ₹ 250 ಹಣ ಪಡೆಯಲಾಗುತ್ತದೆ. ಅದರ ವೀರ್ಯ ಮಾರಾಟದಿಂದ ಸ್ಥಿರವಾದ ಆದಾಯವು ಮಾಸಿಕ ₹ 4-5 ಲಕ್ಷ ಬರುತ್ತದೆ. ಇದು ಗಿಲ್ ಅವರು ಕೋಣವನ್ನು ಸಾಕಲು ಬೇಕಾದ ವೆಚ್ಚಗಳನ್ನು ಸರಿದೂಗಿಸಲು ಗಮನಾರ್ಹವಾಗಿ ಸಹಾಯ ಮಾಡುತ್ತದೆ.ಗಿಲ್ ಅವರು ಅನ್ಮೋಲ್ ಅನ್ನು ಕುಟುಂಬದ ಸದಸ್ಯರಂತೆ ನೋಡುತ್ತಾರೆ. ಹೀಗಾಗಿ ಅದಕ್ಕೆ 23 ಕೋಟಿ ರೂಪಾಯಿ ಬೆಲೆ ನಿಗದಿ ಮಾಡಿದ್ದರೂ ಅವರು ಅದನ್ನು ಮಾರಾಟ ಮಾಡಲು ಒಪ್ಪಿಲ್ಲ.