ಬೆಂಗಳೂರು: ಕೊಲೆ ಕೇಸ್ ಆರೋಪದಡಿ ಕಂಬಿ ಹಿಂದೆ ಇರುವ ನಟ ದರ್ಶನ್ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.

ದರ್ಶನ್ ಅರೆಸ್ಟ್ ಆದ ಬೆನ್ನಲ್ಲೇ ಅವರನ್ನ ಸೋಷಿಯಲ್‌ ಮೀಡಿಯಾದಿಂದ ಅನ್ ಫಾಲೋ ಮಾಡಿ ಸಾಮಾಜಿಕ ಮಾಧ್ಯಮದಿಂದಲೇ ದೂರವಿದ್ದ ವಿಜಯಲಕ್ಷ್ಮೀ ಇದೀಗ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪತಿ ದರ್ಶನ್ ಬಗ್ಗೆ ಕಪೋಲಕಲ್ಪಿತ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದಾರೆ.

ದರ್ಶನ್ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿರುವ ಪತ್ರವನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ನಮಸ್ಕಾರ ಮೊದಲಿಗೆ, ರೇಣುಕಾಸ್ವಾಮಿ ಅವರ ಕುಟುಂಬಸ್ಥರಿಗೆ ನಾನು ಹೃದಯಪೂರ್ವಕ ಸಾಂತ್ವನವನ್ನು ತಿಳಿಸಲು ಬಯಸುತ್ತೇನೆ. ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಮನೆಯವರಿಗೆ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಕಳೆದ ಕೆಲವು ದಿನಗಳಲ್ಲಿ, ದರ್ಶನ್ ಅವರು, ನಾನು, ನಮ್ಮ ಮಗ, ದರ್ಶನರ ಸೆಲೆಬ್ರಿಟೀಸ್ ಮತ್ತು ಕುಟುಂಬದವರು ಪದಗಳಲ್ಲಿ ವಿವರಿಸಲಾಗದ ನೋವನ್ನು ಅನುಭವಿಸಿದ್ದೇವೆ ಎಂದಿದ್ದಾರೆ.

ಇನ್ನು ಮುಂದಾದರೂ ಅಸತ್ಯಗಳು ಹಾಗೂ ಅನಧೀಕೃತ ಮಾಹಿತಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗದಿರಲಿ ಎಂದು ಕೇಳಿಕೊಳ್ಳುತ್ತೇನೆ. ತಾಯಿ ಚಾಮುಂಡೇಶ್ವರಿ ಮತ್ತು ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ ಸತ್ಯಮೇವ ಜಯತೆ! ಎಂದು ಬರೆದು ಪೋಸ್ಟ್ ಮಾಡಿದ್ದಾರೆ.