ಬೆಳಗಾವಿ : ಕಳೆದ ಶನಿವಾರ ಸ್ಟ್ರೇಕ್ಚರ್ ಮೇಲೆ ಅಂಬುಲೆನ್ಸ್ ವರೆಗೂ ಕಾಲ್ನಡಿಗೆಯಲ್ಲಿ ತಂದು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಮಹಿಳೆ ಕೊನೆಗೂ ಗುರುವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಹರ್ಷದಾ ಘಾಡಿ(42) ಎಂಬುವರು ಮೃತಪಟ್ಟ ಅನಾರೋಗ್ಯ ಪೀಡಿತ ಮಹಿಳೆ. ಖಾನಾಪುರ ತಾಲೂಕಿನ ಮುಖ್ಯ ರಸ್ತೆಯಿಂದ 12 ಕಿಲೋಮೀಟರ್ ದೂರದ ದಟ್ಟ ಅರಣ್ಯ ಪ್ರದೇಶ ಒಳಗೊಂಡಿರುವ ಅಮಗಾಂವ ಗ್ರಾಮದವರು. ಅವರಿಗೆ ಹಠಾತ್ತನೇ ಅನಾರೋಗ್ಯ ಕಾಣಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಅಲ್ಲಿನ ಗ್ರಾಮಸ್ಥರು ಸುರಿಯುತ್ತಿರುವ ಮಳೆಯಲ್ಲೇ ಅವರನ್ನು ಸ್ಟ್ರಕ್ಚರ್ ಮೇಲೆ ಕಾಲ್ನಡಿಗೆಯಲ್ಲಿ ಒಬ್ಬರ ನಂತರ ಮತ್ತೊಬ್ಬರು ಹೊತ್ತು ತಂದು ಅಂಬುಲೆನ್ಸ್ ವರೆಗೂ ಸಾಗಿಸಿದ್ದರು. ನಂತರ ಆಂಬುಲೆನ್ಸ್ ನಲ್ಲಿ ಖಾನಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಂತರ ಬೆಳಗಾವಿಗೆ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು. ಆದರೆ ಅವರು ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಾಕಷ್ಟು ನುರಿತ ವೈದ್ಯರು ಚಿಕಿತ್ಸೆ ನೀಡಿದರೂ ಅವರು ಬದುಕಿ ಉಳಿಯಲಿಲ್ಲ, ಅವರಿಗೆ ಇಬ್ಬರು ಸಣ್ಣ ಮಕ್ಕಳಿದ್ದು ಮಕ್ಕಳಿದ್ದಾರೆ. ಗ್ರಾಮದಲ್ಲಿ ಸಾಕಷ್ಟು ಜನ ಮಳೆಗಾಲದಲ್ಲಿ ಅನಾರೋಗ್ಯಪೀಡಿತರಾಗಿ ಸೂಕ್ತ ಕಾಲಕ್ಕೆ ಚಿಕಿತ್ಸೆ ಸಿಗದೇ ಪರದಾಡುವಂತೆ ಆಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.ಖಾನಾಪುರ ತಾಲೂಕಿನ ಅಮಗಾಂವ ಗ್ರಾಮದಲ್ಲಿ ಸುಮಾರು 73 ಕುಟುಂಬಗಳಿವೆ. 560 ಜನ ವಾಸಿಸುತ್ತಿದ್ದಾರೆ. ಪಡಿತರ ಬೇಕಾದರೆ ನಾಗರಿಕರು ಚಿಕಲೆ ಅಥವಾ ಜಾಂಬೋಟಿಗೆ ಬರಬೇಕು. ವಾರಕ್ಕೊಮ್ಮೆ ಕಿರಾಣಿ ಸಾಮಗ್ರಿ ಖರೀದಿಸುವ ಪರಿಸ್ಥಿತಿ ಇಲ್ಲಿನ ಗ್ರಾಮಸ್ಥರದ್ದಾಗಿದೆ ಎಂದು ಗ್ರಾಮದ ಜನತೆ ಅಲ್ಲಿನ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.