ಬೆಳಗಾವಿ – ರಂಗಭೂಮಿ ಶಾಶ್ವತವಾದದ್ದು ಮತ್ತು ಸತ್ಯವಾದದ್ದು ಎಂದು ನಾಗನೂರು ರುದ್ರಾಕ್ಷಿಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಬೆಳಗಾವಿಯ ಕನ್ನಡಭವನದಲ್ಲಿ ಭಾನುವಾರ ಸಂಜೆ ರಂಗಸೃಷ್ಟಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಮತ್ತು ರಂಗಸೃಷ್ಟಿ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಜಗತ್ತು ವಿಜ್ಞಾನದಲ್ಲಿ ಸಾಕಷ್ಡು ಮುಂದುವರಿದಿದೆ. ಎಲ್ಲವನ್ನೂ ನಾವು ಅನುಭವಿಸುತ್ತಿದ್ದೇವೆ. ಇವೆಲ್ಲವೂ ಇಲ್ಲದೇ ಹೇಗೆ ಬದುಕಬೇಕು ಎನ್ನುವುದನ್ನು ನಾವು ಕಲಿಬೇಕು, ಅಂತಹ ದಿನ ಮುಂದೆ ಬರಬಹುದು
ಎಂದು ಸ್ವಾಮೀಜಿ ಎಚ್ಚರಿಸಿದರು.
ನಾಟಕ ಶಾಶ್ವತವಾಗಿ ಉಳಿಯುವಂತದ್ದು. ಸಾಮಾಜಿಕ ಜಾಲತಾಣದಿಂದ ಹೊಡೆತ ಅನುಭವಿಸಿದ್ದರೂ ಹಲವರ ಸೇವೆಯಿಂದಾಗಿ ನಾಟಕ ರಂಗ ಉಳಿದಿದೆ. ಸಿನೇಮಾಗಳನ್ನು ಪರದೆಯ ಮೇಲೆ ನೋಡುತ್ತೇವೆ, ಆದರೆ ನಾಟಕ ಪ್ರತ್ಯಕ್ಷವಾಗಿ ಅಭಿನಯಿಸುವಂತದ್ದು. ಮುಂದೆ ಶಾಶ್ವತವಾಗಿ, ಸತ್ಯವಾಗಿ ಇರುವಂತದ್ದು ನಾಟಕ, ರಂಗಭೂಮಿ ಮಾತ್ರ ಎಂದು ಶ್ರೀಗಳು ಹೇಳಿದರು.
ತಮ್ಮ ಜೀವನವನ್ನು ರಂಗಭೂಮಿಗೆ ಅರ್ಪಿಸಿರುವ ಝಾಕೀರ್ ನದಾಫ್ ಅವರಿಗೆ ರಂಗಸೃಷ್ಟಿ ಸನ್ಮಾನ ನೀಡಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಸನ್ಮಾನ ಸ್ವೀಕರಿಸಿದ ಸವದತ್ತಿಯ ರಂಗ ಆರಾಧನಾ ಸಂಸ್ಥೆಯ ಝಾಕೀರ ನದಾಫ್ ಮಾತನಾಡಿ, ನಾನು ಈ ಮಟ್ಟಕ್ಕೆ ಬರಲು ಹಲವರು ಕಾರಣರಾಗಿದ್ದಾರೆ. ಎಲ್ಲರ ಸಹಕಾರದಿಂದ ಇಷ್ಟು ವರ್ಷ ರಂಗಸೇವೆ ಮಾಡಲು ಸಾಧ್ಯವಾಗಿದೆ. ನನ್ನ ಕೆಲಸವನ್ನು ಗುರುತಿಸಿ ರಂಗಸೃಷ್ಟಿ ಸನ್ಮಾನ ನೀಡಿರುವುದಕ್ಕೆ ಕೃತಜ್ಞನಾಗಿದ್ದೇನೆ ಎಂದರು. ಮಾನವೀಯತೆಯನ್ನು ಕಲಿಸುವ ಶಾಲೆ ರಂಗಭೂಮಿ ಎಂದೂ ಅವರು ತಿಳಿಸಿದರು.
ರಂಗಸೃಷ್ಟಿ ಅಧ್ಯಕ್ಷ ರಮೇಶ ಜಂಗಲ್ ಮತ್ತು ಉಪಾಧ್ಯಕ್ಷ ಎಂ.ಕೆ.ಹೆಗಡೆ ಝಾಕೀರ್ ನದಾಫ್ ಅವರಿಗೆ ರಂಗ ಸೃಷ್ಟಿ ಸನ್ಮಾನ ಪ್ರದಾನ ಮಾಡಿದರು. ಹಿರಿಯ ಸಾಹಿತಿ ರಾಮಕೃಷ್ಣ ಮರಾಠೆ ಕಾರ್ಯಕ್ರಮ ನಿರೂಪಿಸಿದರು. ಪಿ.ಜಿ. ಕೆಂಪಣ್ಣವರ್ ಸನ್ಮಾನ ಪತ್ರ ವಾಚಿಸಿದರು. ಹಿರಿಯ ಸಾಹಿತಿ ಡಾ.ಸರಜೂ ಕಾಟ್ಕರ್, ಶಿರೀಶ್ ಜೋಶಿ ಮೊದಲಾದವರು ಇದ್ದರು.
ನಂತರ ರಾಮಕೃಷ್ಣ ಮರಾಠೆ ರಚಿಸಿರುವ ಈಸಕ್ಕಿಯ ಆಸೆ ನಾಟಕ ಪ್ರದರ್ಶನವಾಯಿತು. ಶಿರೀಶ್ ಜೋಶಿ ನಿರ್ದೇಶನ, ಶಾಂತಾ ಆಚಾರ್ಯ ನೃತ್ಯ ಸಂಯೋಜನೆ, ಮಂಜುಳಾ ಜೋಶಿ ಸಂಗೀತ ಸಂಯೋಜನೆ, ಸಂತೋಷ ಮಹಾಲೆ ಪ್ರಸಾದನ, ಗುರುದತ್ತ ಪೆಡ್ನೇಕರ್ ನೆಳಲು- ಬೆಳಕು, ಶರಣಗೌಡ ಪಾಟೀಲ ರಂಗ ವಿನ್ಯಾಸ, ರವಿರಾಜ ಭಟ್ ಸಂಗೀತ ನಿರ್ವಹಣೆ ಮಾಡಿದ್ದರು. ನಾಟಕವನ್ನು ಸಂಪೂರ್ಣ ವೀಕ್ಷಿಸಿದ ಅಲ್ಲಮಪ್ರಭು ಸ್ವಾಮೀಜಿ, ಡಾ.ಸರಜೂ ಕಾಟ್ಕರ್, ಅರವಿಂದ ಪಾಟೀಲ, ವಿಜಯಲಕ್ಷ್ಮೀ ಪುಟ್ಟಿ ಮತ್ತಿತರರು ನಾಟಕದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.