ಬೆಂಗಳೂರು: ಈ ಬಾರಿ ಬೆಳಗಾವಿಯಲ್ಲಿ ಉತ್ತಮ ವಾತಾವರಣವಿದ್ದು, ಕಾಂಗ್ರೆಸ್ ಪರ ಅಲೆ ಇದೆ ಎನ್ನುವುದು ನಮ್ಮ ಸಮೀಕ್ಷೆಗಳಿಂದ ಸ್ಪಷ್ಟವಾಗಿದೆ. ಹಾಗಾಗಿ ಬೆಳಗಾವಿ, ಚಿಕ್ಕೋಡಿ ಮತ್ತು ಕೆನರಾ ಲೋಕಸಭಾ ಕ್ಷೇತ್ರಗಳು ಕಾಂಗ್ರೆಸ್ ಪಕ್ಷದ ವಶಕ್ಕೆ ಬರಲಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಬಳಗದೊಂದಿಗೆ ಅವರು ಮಾತನಾಡಿದರು. ಲೋಕಸಭೆಯ ಚುನಾವಣೆಯ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದ ಡಿ.ಕೆ.ಶಿವಕುಮಾರ, ವಿಧಾನ ಸಭೆ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ನಾವು ಅತ್ಯಧಿಕ ಸ್ಥಾನ ಗೆದ್ದಿದ್ದೇವೆ. ಅದೇ ಒಗ್ಗಟ್ಟು ಮತ್ತು ಪರಿಶ್ರಮ ಹಾಕಿ ಮೂರೂ ಕ್ಷೇತ್ರಗಳನ್ನು ಗೆಲ್ಲಿಸಬೇಕು. ನಮ್ಮಿಂದ ಯಾವುದೇ ಸಹಕಾರ ಬೇಕೆದ್ದರೂ ನೀಡಲು ಸಿದ್ಧರಿದ್ದೇವೆ. ಅತ್ಯಂತ ವ್ಯವಸ್ಥಿತವಾಗಿ ಚುನಾವಣೆ ಎದುರಿಸಿ ಎಂದು ಸಲಹೆ ನೀಡಿದರು.
ಪ್ರತಿಬಾರಿ ಒಂದೊಂದು ಅಲೆಯನ್ನೇ ನಂಬಿಕೊಳ್ಳುವ ಬಿಜೆಪಿಗೆ ಈ ಬಾರಿ ಯಾವ ಅಲೆಯೂ ಇಲ್ಲ. ಈಗ ಏನಿದ್ದರೂ ಕಾಂಗ್ರೆಸ್ ಅಲೆ. ಗ್ಯಾರಂಟಿಗಳ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಿರುವ ಕಾಂಗ್ರೆಸ್ ಪಕ್ಷವನ್ನು ಜನರು ಬೆಂಬಲಿಸಲಿದ್ದಾರೆ ಎಂದು ಡಿ.ಕೆ.ಶಿವಕುಮಾರ ಹೇಳಿದರು.
ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ್, ಜಿಲ್ಲೆಯ ಶಾಸಕರು, ಮುಖಂಡರು ಉಪಸ್ಥಿತರಿದ್ದರು.