ಬೆಳಗಾವಿ : ದೇಶ ಈಗ ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಇದು ಅವಿಸ್ಮರಣೀಯ. ಈಗಲಾದರೂ ಬೆಳಗಾವಿ-ನಿಪ್ಪಾಣಿ-ಕಾಗಲ್-ಕೊಲ್ಲಾಪುರ ನೇರ ರೈಲು ಮಾರ್ಗ ನಿರ್ಮಾಣವಾಗಬೇಕು ಎಂಬ ಬೇಡಿಕೆ ಈಗ ಜೋರಾಗತೊಡಗಿದೆ.
ಈ ಮಾರ್ಗ ಪೂರ್ಣಗೊಳ್ಳಲು ಬೆಳಗಾವಿ ಮತ್ತು ಕೊಲ್ಲಾಪುರ ಜಿಲ್ಲೆಗಳ ಎಲ್ಲಾ ಜನಪ್ರತಿನಿಧಿಗಳು ಶ್ರಮಿಸಬೇಕು. ಇದು ಇಂದು ನಿನ್ನೆಯ ಬೇಡಿಕೆಯಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ನಿಪ್ಪಾಣಿ ಜನರು ರೈಲ್ವೆ ಬೇಡಿಕೆಗೆ ಒತ್ತಾಯಿಸುತ್ತಲೇ ಬಂದಿದ್ದಾರೆ.
ಸದ್ಯ ಬೆಳಗಾವಿ, ಹುಕ್ಕೇರಿ ಸಂಕೇಶ್ವರ, ನಿಪ್ಪಾಣಿ, ಕಾಗಲ್, ಕೊಲ್ಲಾಪುರ ಮಾರ್ಗದಲ್ಲಿ ನಡೆಯುತ್ತಿರುವ ರೈಲು ಮಾರ್ಗದ ಸಮೀಕ್ಷೆಗೆ ಸರಕಾರಗಳು ಗರಿಷ್ಠ ಗಮನ ಹರಿಸಬೇಕು.
ಈ ನೇರ ರೈಲು ಮಾರ್ಗದಿಂದಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಭಾಗದಲ್ಲಿರುವ ಎರಡು ಜಿಲ್ಲೆಗಳಷ್ಟೇ ಅಲ್ಲ, ಎರಡು ರಾಜ್ಯಗಳು ಸನಿಹದಲ್ಲಿ ಸಂಪರ್ಕ ಹೊಂದಿ ಉಭಯ ರಾಜ್ಯಗಳ ಕೈಗಾರಿಕೆ, ಶೈಕ್ಷಣಿಕ, ಸಾಂಸ್ಕೃತಿಕ, ತಾಂತ್ರಿಕ, ಕೃಷಿ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಲಿದೆ. ಈ ಮಾರ್ಗದಲ್ಲಿ ಪರಸ್ಪರ ದೂರ ಕಡಿಮೆ ಮಾಡುವುದರಿಂದ ಇಂಧನ, ಸಮಯ ಮತ್ತು ಹಣ ಉಳಿತಾಯವಾಗುತ್ತದೆ. ಈ ಮಾರ್ಗದಲ್ಲಿ ರೈಲು ಮಾರ್ಗ ಕಾರ್ಯಗತಗೊಳಿಸಲು ಶ್ರಮಿಸಬೇಕು ಎಂದು
ನಿಪ್ಪಾಣಿ ರೈಲ್ವೆ ಸಮಿತಿಯ ಪ್ರೊ. ರಾಜನ್ ಚಿಕೋಡೆ ಅವರು ಇಮೇಲ್ ಮೂಲಕ ಜನಪ್ರತಿನಿಧಿಗಳಿಗೆ ಮನವಿ ಪತ್ರವನ್ನು ಕಳುಹಿಸಿದ್ದಾರೆ. ಬೆಳಗಾವಿ ಮತ್ತು ಕೊಲ್ಲಾಪುರ ಎರಡು ಪ್ರಮುಖ ನಗರಗಳಿಗೆ ಈ ಹೊಸ ರೈಲುಮಾರ್ಗ ಸಂಪರ್ಕ ಕಲ್ಪಿಸಲಿದೆ. ಆದ್ದರಿಂದ ಎರಡೂ ನಗರಗಳಲ್ಲಿ ಕೈಗಾರಿಕಾ
ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ. ಇದಲ್ಲದೇ ಎರಡೂ ಸ್ಥಳಗಳ ಪ್ರವಾಸೋದ್ಯಮಕ್ಕೆ ಒಳ್ಳೆಯ ದಿನಗಳು ಬರಲಿವೆ. ಬೆಳಗಾವಿಯಿಂದ ಕೊಲ್ಲಾಪುರಕ್ಕೆ ನೇರ ರೈಲು ಮಾರ್ಗವಿಲ್ಲ. ಬೆಳಗಾವಿಯಿಂದ ಮೀರಜ್ ಗೆ ಹೋಗಿ ಅಲ್ಲಿಂದ ಕೊಲ್ಲಾಪುರಕ್ಕೆ ಹೋಗಬೇಕು. ಇಲ್ಲವೇ ಪುಣೆ-ಬೆಂಗಳೂರು ಹೆದ್ದಾರಿ ಮೂಲಕ ಪ್ರಯಾಣಿಸಬೇಕು. ಈ ಹೊಸ ರೈಲು ಮಾರ್ಗದಿಂದ ಈ ಎರಡು ನಗರಗಳು ಸಂಪರ್ಕಗೊಳ್ಳಲಿವೆ. ಈ ಹೊಸ ಮಾರ್ಗದಲ್ಲಿ ರೈಲು ಗಂಟೆಗೆ ಗರಿಷ್ಠ 160 ಕಿ.ಮೀ ವೇಗದಲ್ಲಿ ಓಡಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ರೈಲು ಮಾರ್ಗ ನಿರ್ಮಾಣವಾಗಬೇಕು. ಈ ಮಾರ್ಗ ಅಸ್ತಿತ್ವಕ್ಕೆ ಬಂದರೆ ಬೆಳಗಾವಿ-ಕೊಲ್ಲಾಪುರ ಪ್ರಯಾಣವನ್ನು ಕಡಿಮೆ ಸಮಯದಲ್ಲಿ ಮತ್ತು ಕಡಿಮೆ ವೆಚ್ಚದಲ್ಲಿ ಪೂರ್ಣಗೊಳಿಸಬಹುದು. ಜನವರಿ 2024 ರಲ್ಲಿ ರೈಲ್ವೆ ಮಂಡಳಿಯು ಸರ್ವೇಗೆ ಅನುಮೋದನೆ ನೀಡಿತು. ಈ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನೂ ನಿಗದಿಪಡಿಸಲಾಗಿದೆ. ಅದರಂತೆ ರೈಲ್ವೆ ಮಂಡಳಿ ಮುಂದಿನ ಕ್ರಮ ಕೈಗೊಂಡಿದೆ. ವಾಸ್ತವವಾಗಿ ಸಮೀಕ್ಷೆ ಪ್ರಾರಂಭವಾಗಿದೆ. ಈ ಸಮೀಕ್ಷೆಯಲ್ಲಿ ತಾಂತ್ರಿಕವಾಗಿ ಬೆಳಗಾವಿ-ಕೊಲ್ಲಾಪುರ ರೈಲ್ವೆ ನಿರ್ಮಾಣ ಸಾಧ್ಯವೇ? ಇದನ್ನು ಪರೀಕ್ಷಿಸಲಾಗುತ್ತಿದೆ. ಇದಕ್ಕಾಗಿ ಡ್ರೋನ್ ಕ್ಯಾಮೆರಾ ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನೂ ಬಳಸಲಾಗುತ್ತಿದೆ. ಒಟ್ಟಾರೆ ಈಗ ಬೆಳಗಾವಿ-ನಿಪ್ಪಾಣಿ- ಕಾಗಲ್ -ಕೊಲ್ಲಾಪುರ ಬೆಸೆಯುವ ನೇರ ರೈಲು ಮಾರ್ಗ ಆದಷ್ಟು ಬೇಗ ನಿರ್ಮಾಣವಾಗಬೇಕು ಎಂಬ ಕನಸು ಉಭಯ ರಾಜ್ಯಗಳ ಜನತೆಯಿಂದ ವ್ಯಕ್ತವಾಗುತ್ತಿದೆ.